ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾರಿಗೆ ಇಲಾಖೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಇದೀಗ ಮತ್ತೊಂದು ಮಹತ್ವದ ಅಭಿವೃದ್ಧಿಯನ್ನು ಕೆಎಸ್ಆರ್ಟಿಸಿ ಮಾಡಿದೆ.
ಹೌದು, ಸಾರಿಗೆ ಇಲಾಖೆಯಿಂದ ಈಗಾಗಲೇ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಅದರಂತೆ ಇದೀಗ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇರವಾಗಿ ದಾವಣಗೆರೆಗೆ ಕೆಎಸ್ಆರ್ಟಿಸಿ ಫ್ಲೈಬಸ್ ಗೆ ಇಂದು (ನ. 12) ಸಾರಿಗೆ ಇಲಾಖೆಯ ಸಚಿವರಾದ ರಾಮಲಿಂಗ ರೆಡ್ಡಿ ಅವರು ಚಾಲನೆ ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಐಎಬಿ ನಿಂದ ದಾವಣಗೆರೆಗೆ ಪ್ರತಿದಿನ 2 ಫ್ಲೈಬಸ್ಗಳು ಸಂಚರಿಸಲಿವೆ. ಈ ಬಸ್ಗಳು ತುಮಕೂರು ಮತ್ತು ಚಿತ್ರದುರ್ಗ ಬೈಪಾಸ್ ಮಾರ್ಗವಾಗಿ ಪ್ರಯಾಣಿಸಲಿವೆ ಎಂದು ಸಾರಿಗೆ ಇಲಾಖೆ ತಿಳಿಸಿದೆ. ಏರ್ಪೋರ್ಟ್ಗೆ ಬರುವ ಮತ್ತು ಏರ್ಪೋರ್ಟ್ನಿಂದ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಈ ನೂತನ ಫ್ಲೈಬಸ್ ಸೇವೆ ಆರಂಭಿಸಲಾಗಿದೆ. ಇದನ್ನೂ ಓದಿ: ಕೈಗಾರಿಕಾ ಬಾಂಧವ್ಯ ವೃದ್ಧಿಗೆ 2026ರಲ್ಲಿ ಸಿಂಗಪುರ ಭೇಟಿ: ಎಂ ಬಿ ಪಾಟೀಲ
ಈ ಬಸ್ಗಳಲ್ಲಿ ಶೌಚಾಲಯ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನೂ ಒದಗಿಸಲಾಗಿದೆ. ಇಲ್ಲಿಯವರೆಗೆ ಮೈಸೂರು, ಮಡಿಕೇರಿ, ಕುಂದಾಪುರ ಸೇರಿದಂತೆ ಕೆಲವು ನಗರಗಳಿಗೆ ಮಾತ್ರ ಫ್ಲೈಬಸ್ ಸೇವೆ ಲಭ್ಯವಿತ್ತು. ಈಗಿನಿಂದ ಹೆಚ್ಚುವರಿಯಾಗಿ ದಾವಣಗೆರೆಯತ್ತವೂ ನೇರ ಸಂಪರ್ಕ ಸಿಗಲಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ
