ಬೆಂಗಳೂರು: ಸೌತ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ (SIMA) ವತಿಯಿಂದ ಡಿಸೆಂಬರ್ 6 ರಂದು ಹಮ್ಮಿಕೊಂಡಿರುವ ದಕ್ಷಿಣ ರಾಜ್ಯಗಳ ಮಾಧ್ಯಮ ಸಮ್ಮೇಳನವನ್ನು ಉದ್ಘಾಟಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಿನ್ನೆ (ಗುರುವಾರ ನ. 06) ಆಹ್ವಾನ ನೀಡಲಾಯಿತು.
ಸೈಮಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎನ್.ಕೆ. ಸ್ವಾಮಿ, ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶ್ರೀಧರ್ ಮತ್ತು ಬೆಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಮ್ಮೇಳನಕ್ಕೆ ಆಹ್ವಾನಿಸಿದರು.
ಬದಲಾದ ಮಾಧ್ಯಮ ಪರಿಸ್ಥಿತಿ ಮತ್ತು ಸವಾಲುಗಳ ಚರ್ಚೆ
ಮಾಧ್ಯಮ ಕ್ಷೇತ್ರವು ನಿರೀಕ್ಷೆಗೂ ಮೀರಿ ವೇಗವಾಗಿ ಬದಲಾಗುತ್ತಿದ್ದು, ಸುಧಾರಿತ ತಂತ್ರಜ್ಞಾನದಿಂದ ಹೊಸ ಸ್ವರೂಪದಲ್ಲಿ ಹೊರಹೊಮ್ಮುತ್ತಿದೆ. ಕೇವಲ ಪತ್ರಿಕೆಗಳಿಗೆ ಸೀಮಿತವಾಗಿದ್ದ ಮಾಧ್ಯಮ ಕ್ಷೇತ್ರ ಈಗ ಎಲೆಕ್ಟ್ರಾನಿಕ್ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದ ಮಾಧ್ಯಮಗಳ ರೂಪದಲ್ಲಿ ಸಮಾಜದ ಪ್ರತಿ ಮೂಲೆಗಳನ್ನೂ ತಲುಪುತ್ತಿದೆ.
ಸಮ್ಮೇಳನದ ಉದ್ದೇಶ:
ಇಂತಹ ಮಾಧ್ಯಮಗಳು ದೇಶದ ಆಡಳಿತ ವ್ಯವಸ್ಥೆ, ಅರ್ಥ ವ್ಯವಸ್ಥೆ ಹಾಗೂ ಚುನಾವಣಾ ವ್ಯವಸ್ಥೆಗಳ ಮೇಲೆ ನೇರ ಪರಿಣಾಮ ಬೀರುತ್ತಿವೆ. ಈ ಬದಲಾದ ಪರಿಸ್ಥಿತಿಯ ಬಗ್ಗೆ ಚರ್ಚಿಸುವುದು ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ.
ಚರ್ಚೆಯ ವಿಷಯಗಳು:
ಮಾಧ್ಯಮಗಳ ಭವಿಷ್ಯದ ಸವಾಲುಗಳು ಮತ್ತು ಸರ್ಕಾರಗಳು, ರಾಜಕೀಯ ವ್ಯವಸ್ಥೆಯೊಂದಿಗೆ ಮಾಧ್ಯಮಗಳ ಸಮನ್ವಯದ ಬಗ್ಗೆ ಚರ್ಚೆ ನಡೆಯಲಿದೆ. ಜೊತೆಗೆ, ದಕ್ಷಿಣ ಭಾರತದ ರಾಜ್ಯಗಳ ವಿವಿಧ ಮಾಧ್ಯಮಗಳಲ್ಲಿರುವ ಪತ್ರಕರ್ತರ ಸಮಸ್ಯೆಗಳನ್ನು ವಿಶ್ಲೇಷಿಸಲಾಗುವುದು.
ದಕ್ಷಿಣ ಭಾರತದ ಪತ್ರಕರ್ತರ ಮಹಾ ಒಕ್ಕೂಟ ‘ಸೈಮಾ’
ಸೌತ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ (ರಿ) ದಕ್ಷಿಣ ಭಾರತದ ಐದು ರಾಜ್ಯಗಳ ಪತ್ರಕರ್ತರ ಮತ್ತು ಸಹೃದಯರ ಒಕ್ಕೂಟವಾಗಿದೆ. ಇದು ಪ್ರಥಮ ಬಾರಿಗೆ ಐದು ರಾಜ್ಯಗಳ ಪತ್ರಕರ್ತರು ಒಂದುಗೂಡುವ ವೇದಿಕೆಯಾಗಿದ್ದು, ಈ ಮೂಲಕ ಸಾಮೂಹಿಕ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಲು ಉದ್ದೇಶಿಸಲಾಗಿದೆ.
ಸಂಸ್ಥೆಯ ಉದ್ಘಾಟನೆ ಮತ್ತು ಸಮ್ಮೇಳನಕ್ಕೆ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಪಾಂಡಿಚೇರಿ ಸೇರಿದಂತೆ ಮಾನ್ಯ ಸ್ಪೀಕರ್‌ಗಳು ಹಾಗೂ ಮಾಹಿತಿ ಇಲಾಖೆ ಸಚಿವರು ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆ ಡೇಟ್ ಫಿಕ್ಸ್!?
“ಈ ಕಾರ್ಯಕ್ರಮಕ್ಕೆ ಕರ್ನಾಟಕ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಆಗಮನ ಪತ್ರಕರ್ತರಿಗೆ ದೊರೆಯುವ ಅಮೂಲ್ಯ ಕೊಡುಗೆ,” ಎಂದು ಸೈಮಾ ಪ್ರಧಾನ ಕಾರ್ಯದರ್ಶಿ ಎನ್.ಕೆ. ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
