ಬೆಂಗಳೂರು: ಇದ್ದಕ್ಕಿದ್ದಂಗೆ ಕಂಟೈನರ್ ಟ್ರಕ್ ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು ನಾಲ್ಕು ಮಂದಿಗೆ ಗಂಭೀರ ಗಾಯವಾಗಿರುವ ಘಟನೆ ಬೆಂಗಳೂರು ಹೊರವಲಯದ ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಭಾನುವಾರ ಬೆಳಗ್ಗೆ ಉರಗನದೊಡ್ಡಿ ಬಳಿ ರಸ್ತೆ ತಿರುವು ತೆಗೆದುಕೊಳ್ಳುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಇನ್ನು ಮೃತರನ್ನು ಆಂಧ್ರಪ್ರದೇಶ ಮೂಲದ ಟ್ರಕ್ ಚಾಲಕ ಶ್ರೀನಿವಾಸ್ (26) ಮತ್ತು ಜಾರ್ಖಂಡ್ನಿಂದ ಬಂದಿದ್ದ ಕೇಬಲ್ ಡ್ರಿಲ್ಲಿಂಗ್ ಮೆಷಿನ್ ಆಪರೇಟರ್ ಶ್ರೀಮನ್ (25) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ನಾಲ್ವರು ಕಾರ್ಮಿಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ನಾಯಕತ್ವ ಬದಲಾವಣೆ ಸುಳಿವು ಕೊಟ್ರಾ ಪರಂ..?
ಬೆಳಗ್ಗೆ 11.45ರ ಸುಮಾರಿಗೆ ಕೇಬಲ್ ಡ್ರಿಲ್ಲಿಂಗ್ ಯಂತ್ರಗಳಿದ್ದ ಕಂಟೈನರ್ ಟ್ರಕ್, ಐವರು ಕಾರ್ಮಿಕರೊಂದಿಗೆ ಬೊಮ್ಮಸಂದ್ರದಿಂದ ಹಾರೋಹಳ್ಳಿಗೆ ಹೋಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಉರಗನದೊಡ್ಡಿ ರಸ್ತೆಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ 6 ಮಂದಿ ಗಾಯಗೊಂಡಿದ್ದು, ಶ್ರೀನಿವಾಸ್ ಮತ್ತು ಶ್ರೀಮನ್ ಕಂಟೈನರ್ ಅಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
