ಬೆಂಗಳೂರು: ರಾಜ್ಯ ಸರ್ಕಾರ ಆರ್ಥಿಕ ದುಸ್ಥಿತಿಯಲ್ಲಿದೆ ಅದನ್ನು ಮುಚ್ಚಿಕೊಳ್ಳಲು ಬಿಜೆಪಿ ಸಂಸದರ ವಿರುದ್ದ ಆರೋಪ ಮಾಡುತ್ತಿದ್ದಾರೆ. ಆರ್ ಎಸ್ ಎಸ್ ವಿರುದ್ದವೂ ರಾಜ್ಯ ಸರ್ಕಾರ ಮೂಲ ಸಂವಿಧಾನದ ವಿರುದ್ದ ಆದೇಶ ಮಾಡಿದೆ ಇದು ಕೋರ್ಟ್ ನಲ್ಲಿ ನಿಲ್ಲುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಆರ್ ಎಸ್ ಎಸ್ ಕಾರ್ಯಕ್ರಮದಿಂದ ದೂರ ಉಳಿಯುವ ಪ್ರಶ್ನೆಯೇ ಇಲ್ಲ. ಇದೊಂದು ಸ್ವತಂತ್ರ ದೇಶ ವಾಕ್ ಸ್ವಾತಂತ್ರ್ಯ ವ್ಯಕ್ತಿ ಸ್ವಾತಂತ್ರ್ಯ, ಸಾಮಾಜಿಕ, ಧಾರ್ಮಿಕ ಸ್ವಾತಂತ್ರ್ಯ ಇದೆ. ಆರ್ ಎಸ್ ಎಸ್ ವಿರುದ್ದ ರಾಜ್ಯ ಸರ್ಕಾರ ಮೂಲ ಸಂವಿಧಾನದ ವಿರುದ್ದ ಆದೇಶ ಮಾಡಿದೆ ಇದು ಕೋರ್ಟ್ ನಲ್ಲಿ ನಿಲ್ಲುವುದಿಲ್ಲ ಎಂದು ಹೇಳಿದರು.
ಯಾರು ಪಥ ಸಂಚಲನ ಕಾರ್ಯಕ್ರಮ ಮಾಡುತ್ತಾರೆ ಅವರಿಗೆ ಅವಕಾಶ ಇದೆ. ಬೇರೆ ಸಂಘಟನೆಗಳು ಪಥ ಸಂಚಲನ ಮಾಡುವುದಿದ್ದರೆ ಮಾಡಲಿ ಇದು ದೊಡ್ಡ ದೇಶ ಇಲ್ಲಿ ಎಲ್ಲ ಸಂಘಟನೆಗೆ ಅವಕಾಶ ಕೊಡಬೇಕು. ಪಥ ಸಂಚಲನಕ್ಕೆ ಅವಕಾಶ ಕೊಡುವ ವಿಚಾರದಲ್ಲಿ ಕೋರ್ಟ್ ಸರಿಯಾದ ತೀರ್ಮಾನ ಮಾಡಿದೆ. ನವೆಂಬರ್ 2 ಕ್ಕೆ ಪಥ ಸಂಚಲನಕ್ಕೆ ಮುಂಜಾಗ್ರತೆ ಕ್ರಮದ ಬಗ್ಗೆ ಸರ್ಕಾರಕ್ಕೆ ಎಚ್ಚರಿಸಿದೆ. ಶಾಂತಿ ಸುವ್ಯವಸ್ಥೆ ಕಾಪಾಡಿ ಅವಕಾಶ ಕಲ್ಪಿಸಬೇಕು ಎಂದು ಸೂಚಿಸಿದೆ. ಪಥ ಸಂಚಲನ ಎಲ್ಲ ಕಡೆ ನಡದಿದೆ. ಎಲ್ಲಿ ಆಕ್ಷೆಪ ಇದೆ ಅಲ್ಲಿ ತೊಂದರೆಯಾಗಿದೆ. ಸರ್ಕಾರದ ಆದೇಶದಿಂದ ಗೊಂದಲ ಉಂಟಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಕುಮಾರಸ್ವಾಮಿ ಬಳಿ ಸಾಕ್ಷಿಗುಡ್ಡೆ ಇದ್ದರೆ ರಾಜ್ಯಕ್ಕೆ ತೋರಿಸಲಿ: ಡಿಕೆಶಿ
ನಂಬಿಕೆಗೆ ಧಕ್ಕೆ
ಪಥ ಸಂಚಲನದಿಂದ ಯಾರಿಗಾದರೂ ತೊಂದರೆಯಾಗಿದಿಯಾ, ಸರ್ಕಾರ ಸಮಾಜದಲ್ಲಿ ಕ್ಷೋಭೆ ಉಂಟು ಮಾಡುವ ಕೆಲಸ ಮಾಡುತ್ತಿದೆ. ಇಷ್ಟು ವರ್ಷದಿಂದ ಸಂಘ ಪಥ ಸಂಚಲನ ಮಾಡುತ್ತಿದೆ. ಯಾರಿಗಾದರೂ ತೊಂದರೆಯಾಗಿದಿಯಾ, ಮೊಹರಂ ನಲ್ಲಿ ಕಬ್ಬಿಣದ ಚಾಟಿಯಿಂದ ಹೊಡೆದುಕೊಳ್ಳುತ್ತಾರೆ ಅದು ಸರಿನಾ, ಜಗತ್ತಿನಲ್ಲಿ ಎಲ್ಲರಿಗೂ ಅವರದೇ ಆದ ನಂಬಿಕೆಗಳಿವೆ. ಸರ್ಕಾರ ಅವುಗಳಿಗೆ ಧಕ್ಕೆ ತರುವ ಕೆಲಸ ಮಾಡುವುದು ಸರಿಯಲ್ಲ. ಸರ್ಕಾರದ ಎದುರು ಸಾಕಷ್ಟು ಸಮಸ್ಯೆಗಳಿವೆ. ಸಾಕಷ್ಟು ಮಳೆಯಾಗಿದೆ ಅದಕ್ಕೆ ಪರಿಹಾರ ಕೊಡುವುದನ್ನು ಬಿಟ್ಟು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
