ಬೆಂಗಳೂರು: ಬಿಜೆಪಿ ಸಂಸದರು ಕರ್ನಾಟಕ ರಾಜ್ಯಕ್ಕೆ ಯಾವ ಒಂದು ಅಭಿವೃದ್ಧಿ ಕಾರ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಹತ್ತಿರ ಕೊಡಿಸಲು ಆಗುತ್ತಿಲ್ಲ. ಕೇವಲ ಖಾಲಿ ಟ್ರಂಕ್ ನಂತೆ ಮಾತನಾಡುತ್ತಾರೆ ಹೊರತಾಗಿ ಯಾವ ಅಭಿವೃದ್ಧಿ ಕೆಲಸವನ್ನು ಮಾಡುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬಿಜೆಪಿ ಸಂಸದರ ವಿರುದ್ಧ ಕಿರಿಕರಿದ್ದಾರೆ.
ಯಶವಂತಪುರ ವಿಧಾನಸಭೆ ಕ್ಷೇತ್ರದ ಹೇರೋಹಳ್ಳಿಯ ಭರತ್ ನಗರ ಗಾಂಧಿ ಉದ್ಯಾನವನದಲ್ಲಿ ಇಂದು (ಶನಿವಾರ ಅ. 25) ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ತೇಜಸ್ವಿ ಸೂರ್ಯ ಎಂದರೆ ಖಾಲಿ ಟ್ರಂಕ್ ಎಂದು ಕಿಡಿಕಾರಿದರು.
ಸುರಂಗ ರಸ್ತೆಯನ್ನು ಭೂಮಿಯ ಒಳಗೆ ಕೊರೆಯಲಾಗುವುದು. ಹೊರಗೆ ಮಾಡಲು ಆಗುವುದಿಲ್ಲ. ಅವರ ಮಾತು ಕೇಳಿಕೊಂಡು ಯೋಜನೆ ನಿಲ್ಲಿಸಲು ಆಗುವುದಿಲ್ಲ. ಹಾಗಿದ್ದರೆ ಮುಂಬೈ ನಲ್ಲಿ ಯಾಕೆ ಭೂಮಿ ಕೊರೆದು ಸುರಂಗ ರಸ್ತೆ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಯಾಕೆ ಮಾಡುತ್ತಿದ್ದಾರೆ. ಯಾವುದೇ ಸಂದರ್ಭದಲ್ಲಿ ನಾನು ಆತನಿಗೆ ಬಾಗುವುದಿಲ್ಲ. ಹೋರಾಟ ಮಾಡುವವರು ಮಾಡುತ್ತಾರೆ. ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ. ನಾವು ಜನರಿಗಾಗಿ ಕೆಲಸ ಮಾಡುತ್ತಿದ್ದೇವೆ. ಅವರ ಕಾಲದಲ್ಲಿ ಬೆಂಗಳೂರಿಗಾಗಿ ಯಾವುದೇ ಒಳ್ಳೆಯ ಕೆಲಸ ಮಾಡಲು ಆಗಲಿಲ್ಲ ಎಂದರು.
ಇನ್ನು ಟೋಲ್ ಕಟ್ಟಿ ಹೋಗುವವರಿಗೆ ಈ ರಸ್ತೆ ಮಾಡಲಾಗುತ್ತಿದೆ. ಈ ಯೋಜನೆ ಬೇಡವಾದರೆ ಅವರು ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಒಂದು ಕಾರ್ಯ ಯೋಜನೆಯನ್ನು ನೀಡಲು ಹೇಳಿ. ಬೆಂಗಳೂರಿನ ಸಂಸದರಾಗಿ ಪ್ರಧಾನಮಂತ್ರಿ ಬಳಿ ಒಂದು ದಿನವೂ ಈ ನಗರದ ಅಭಿವೃದ್ಧಿಗೆ 10 ರೂಪಾಯಿ ವಿಶೇಷ ಅನುದಾನ ಕೊಡಿಸಿಲ್ಲ. ಅವರ ಸರ್ಕಾರವಿದ್ದಾಗ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳೇನು? ಅವರು ಸಮಸ್ಯೆ ಬಗೆಹರಿಸಲಿಲ್ಲ ಯಾಕೆ? ಕಾಲದಲ್ಲಿ ಕಸದ ಟೆಂಡರ್ ಕರೆಯಲು ಸಾಧ್ಯವಾಗಲಿಲ್ಲ ಯಾಕೆ? ರಸ್ತೆ ಅಗಲೀಕರಣ, ಫ್ಲೈಓವರ್ ಮಾಡಲಿಲ್ಲ ಯಾಕೆ? ಅವರು ಬೆಂಗಳೂರಿಗಾಗಿ ಏನೂ ಮಾಡಲಿಲ್ಲ. ಇದನ್ನೂ ಓದಿ: ಅಧಿಕಾರಕ್ಕೆ ಬರುವುದು, ಜಿಬಿಎ ರದ್ದುಗೊಳಿಸುವುದು ಬಿಜೆಪಿಯವರ ಹಣೆಯಲ್ಲಿ ಬರೆದಿಲ್ಲ: ಡಿಕೆಶಿ
ಬೆಂಗಳೂರಿನ ಬೀದಿಗಳಲ್ಲಿ ಕೇಬಲ್ ವೈಯರ್ ಗಳು ನೇತಾಡುತ್ತಿರುವುದನ್ನು ನೋಡುತ್ತಿದ್ದೀರಲ್ಲವೇ? ಅವುಗಳನ್ನು ಯಾಕೆ ತೆರವುಗೊಳಿಸಲಿಲ್ಲ. ಮಾಫಿಯಾ ಜೊತೆ ಕೈಜೋಡಿಸಿ, ಬೆಂಗಳೂರನ್ನು ಹದಗೆಡಿಸಿದ್ದಾರೆ. ಈ ಕಾರಣಕ್ಕೆ ಜನ ನಮ್ಮ ಪಕ್ಷಕ್ಕೆ ಬೆಂಬಲಿಸಿ 140 ಶಾಸಕರನ್ನು ಆಯ್ಕೆ ಮಾಡಿ ಅಧಿಕಾರದಲ್ಲಿ ಕೂರಿಸಿದ್ದಾರೆ. ನಾವು ನಮ್ಮ ಕೆಲಸವನ್ನು ಮಾಡೇ ಮಾಡುತ್ತೇವೆ. ಅದಕ್ಕೆ ಬದ್ಧರಾಗಿದ್ದೇವೆ. ಬೆಂಗಳೂರು ಜಾಗತಿಕ ನಗರ. ಇದನ್ನು ಕಾಪಾಡಲು ಏನು ಮಾಡಬೇಕೋ ಅದನ್ನು ಮಾಡಿಯೇ ಮಾಡುತ್ತೇವೆ ಎಂದು ತಿಳಿಸಿದರು.
