ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಏರುಪೇರು ಆಗುತ್ತಿದ್ದು, ಈಗಾಗಲೇ ಅವರು ಹಲವಾರು ಶಸ್ತ್ರ ಚಿಕಿತ್ಸೆಗಳನ್ನ ಮಾಡಿಸಿಕೊಂಡಿದ್ದಾರೆ.
ಇನ್ನು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಮಾಟ ಮಂತ್ರ ಮಾಡಿಸುತ್ತಾರೆ ಎಂದು ಮುನಿರತ್ನ ಅವರು ಹೇಳಿಕೆ ನೀಡಿದ್ದಾರೆ. ಮುನಿರತ್ನ ಅವರ ಹೇಳಿಕೆಗೆ ಇದೀಗ ನಿಖಿಲ್ ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಇಂದು (ಸೋಮವಾರ ಅ. 13) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಇದ್ಯಾವುದರಲ್ಲು ನಂಬಿಕೆ ಇಟ್ಕೊಂಡಿಲ್ಲ. ನಮಗೆ ಗೊತ್ತಿರೋದು ಒಂದೇ ಕಾಯಕವೇ ಕೈಲಾಸ ಅಂತ. ನಾವು ಶಿವನ ಆರಾಧಕರು ಭಕ್ತಿ ಪೂರಕವಾಗಿ ಪೂಜೆ ಮಾಡ್ತೀವಿ. ಅವರು ಹೇಳಿರುವುದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಸರ್ಕಾರಿ ಸ್ಥಳದಲ್ಲಿ ಆರ್ ಎಸ್ ಎಸ್ ಚಟುವಟಿಕೆ ನಿರ್ಬಂಧ : ಸಿಎಂ
ಕರ್ಮ ಯಾರನ್ನು ಬಿಡೋದಿಲ್ಲ. ನಾವು ಏನ್ ಮಾಡ್ತೀವೋ ಅದು ನಮಗೆ ವಾಪಸ್ ಕೊಡುತ್ತೆ. ನನಗೆ ಈ ಬ್ಲ್ಯಾಕ್ ಮ್ಯಾಜಿಕ್ ಬಗ್ಗೆ ಎಲ್ಲಾ ಗೊತ್ತಿಲ್ಲ ಅದನ್ನ ಗಂಭೀರವಾಗಿ ತೆಗೆದುಕೊಳ್ಳೋದು ಬೇಡ ಎಂದು ನಿಖಿಲ್ ಅವರು ಹೇಳಿದರು.
ದೇವೇಗೌಡರಿಗೆ ದೈವದ ಅನುಗ್ರಹವಿದೆ
ಮಾಜಿ ಪ್ರಧಾನಿ ದೇವೇಗೌಡರಿಗೆ ದೈವದ ಅನುಗ್ರಹವಿದೆ. ಎಂಥ ಸಮಸ್ಯೆ ಬಂದರು ಗೆದ್ದು ಬರುತ್ತೇನೆಂದು ಆತ್ಮವಿಶ್ವಾಸ ಇದೆ. ಬಹಳ ಬೇಗ ಗುಣಮುಖರಾಗಿ ಮನೆಗೆ ಬಂದಿದ್ದಾರೆ. ಮಣಿಪಾಲ್ ಆಸ್ಪತ್ರೆಯಲ್ಲಿರುವ ವೈದ್ಯರಿಗೂ ಧನ್ಯವಾದಗಳು. ಅವರ ಶ್ರಮವು ಅಷ್ಟೇ ಇದೆ. ರಾಜ್ಯದ ಏಳುವರು ಕೋಟಿ ಕನ್ನಡಿಗರ ಆಶೀರ್ವಾದ, ಆರೈಕೆ, ಪ್ರೀತಿ ವಾತ್ಸಲ್ಯ ದೇವೇಗೌಡರ ಮೇಲಿದೆ. ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಬಗೆಹರಿದಿದೆ. ಯಾರು ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಅವರು ಇದೇ ವೇಳೆ ತಿಳಿಸಿದರು.
