ಬೆಂಗಳೂರು: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಆರೋಗ್ಯದಲ್ಲಿ ಏರುಪೇರು ಆಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆರೋಗ್ಯ ಸುಧಾರಿಸಿದ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕರೆತರಲಾಗಿದೆ.
ಈಗಾಗಲೇ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರನ್ನು ಭೇಟಿ ಮಾಡಿ ಹಲವಾರು ರಾಜಕೀಯ ನಾಯಕರು ಅವರ ಆರೋಗ್ಯವನ್ನು ವಿವರಿಸಿದ್ದಾರೆ. ಅದರಂತೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವಂತಹ ಎಂ ಸತೀಶ್ ರೆಡ್ಡಿ ಅವರು ಇಂದು (ಸೋಮವಾರ ಅಕ್ಟೋಬರ್ 13) ರಂದು ಸ್ವಗೃಹದಲ್ಲಿ ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದ್ದಾರೆ.
ನಂತರ ಮಾತನಾಡಿದ ಅವರು, ದೇಶ ಕಂಡ ಹಿರಿಯ ರಾಜಕೀಯ ಮುತ್ಸದ್ದಿ, ಗೌರವಾನ್ವಿತ ಮಾಜಿ ಪ್ರಧಾನ ಮಂತ್ರಿಗಳು ಹೆಚ್.ಡಿ. ದೇವೇಗೌಡರು ಸಂಪೂರ್ಣವಾಗಿ ಚೇತರಿಸಿಕೊಂಡು ಎಂದಿನಂತೆ ಲವಲವಿಕೆಯಿಂದ ನಮ್ಮೊಂದಿಗೆ ಸಂವಾದ ನಡೆಸಿ, ಉಭಯ ಕುಶಲೋಪರಿ ವಿಚಾರಿಸಿದರು ಎಂದರು.
ದೇವೇಗೌಡರು ಕರುನಾಡಿನ ಹೆಮ್ಮೆ, ಭಾರತದ ಗೌರವದ ಪ್ರತೀಕ. ಅವರು ಸದಾ ಚೈತನ್ಯಶೀಲರಾಗಿ ದೇಶದ ಬೆಳವಣಿಗೆಯಲ್ಲಿ ಸಕ್ರಿಯರಾಗಿರಲೆಂಬುದು ನಮ್ಮೆಲ್ಲರ ಹಾರೈಕೆಯಾಗಿದೆ.
ಇಂದಿನ ಪೀಳಿಗೆಗೆ ಅವರ ಜೀವನ, ಹೋರಾಟ ಹಾಗೂ ಸರಳ ಜೀವನಶೈಲಿ ಸ್ಫೂರ್ತಿದಾಯಕ ಮಾದರಿಯಾಗಿದೆ. ದೇವೇಗೌಡರು ಶತಾಯುಷ್ಯವನ್ನು ಪೂರೈಸಿ ಇನ್ನೂ ಅನೇಕ ವರ್ಷಗಳು ನಮ್ಮೆಲ್ಲರೊಂದಿಗೆ ಆರೋಗ್ಯವಂತರಾಗಿ ಇರಲೆಂದು ಹಾರೈಸುತ್ತೇವೆ ಎಂದರು. ಇದನ್ನೂ ಓದಿ: ಬೊಮ್ಮನಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ನೀಡಿರುವ ಶಾಸಕ ಸತೀಶ್ ರೆಡ್ಡಿ
ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾದ ಶ್ರೀ ಆರ್ ಅಶೋಕ್ ರವರು,ಶಾಸಕರಾದ ಶ್ರೀ ಮುನಿರಾಜು ರವರು, ಶ್ರೀ ಮುನಿರತ್ನ ರವರು, ಶ್ರೀ ರವಿ ಸುಬ್ರಹ್ಮಣ್ಯ ರವರು,ವಿಧಾನ ಪರಿಷತ್ತು ಸದಸ್ಯರಾದ ಶ್ರೀ ಸಿ.ಟಿ ರವಿ ರವರು, ಹಾಗೂ ಮತ್ತಿತರರು ಉಪಸ್ಥಿತರಿದ್ದರು.
