ಬೆಂಗಳೂರು: ದ್ವಿಚಕ್ರ ವಾಹನ ಮೂಲಕ ಸಂಚರಿಸಿದ ಹಲವು ರಸ್ತೆಗಳಲ್ಲಿ ರಸ್ತೆ ಗುಂಡಿಗಳನ್ನು ಗಮನಿಸಿದ ಆಯುಕ್ತರಾದ ರಾಜೇಂದ್ರ ಚೋಳನ್ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ತುರ್ತಾಗಿ ಗುಂಡಿಗಳನ್ನು ಮುಚ್ಚಲು ಆದೇಶಿಸಿದರು.
ಇಂದು (ಗುರುವಾರ ಅ. 09) ಬೆಳಿಗ್ಗೆ ಕೇಂದ್ರ ನಗರ ಪಾಲಿಕೆಯ ಶಿವಾಜಿನಗರ ವ್ಯಾಪ್ತಿಯಲ್ಲಿನ ವಿವಿಧ ರಸ್ತೆಗಳಲ್ಲಿ ಉಂಟಾಗಿರುವ ರಸ್ತೆ ಗುಂಡಿಗಳು, ರಸ್ತೆ ಗುಂಡಿ ಮುಚ್ಚುವ ಕಾಮಗಾರಿ, ವೈಟ್ ಟಾಪಿಂಗ್ ಕಾಮಗಾರಿ, ರಸ್ತೆ ಬದಿ ತ್ಯಾಜ್ಯ ಬಿಸಾಡಿರುವುದು ಸೇರಿದಂತೆ ಇನ್ನಿತರೆ ಸಮಸ್ಯೆಗಳ ಕುರಿತು ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕೇಂದ್ರ ನಗರ ಪಾಲಿಕೆಯ ಶಿವಾಜಿನಗರ ವಿಭಾಗದಲ್ಲಿ ಕೈಗೆತ್ತಿಕೊಂಡಿರುವ ವೈಟ್ ಟಾಪಿಂಗ್ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಆಯುಕ್ತರಾದ ರಾಜೇಂದ್ರ ಚೋಳನ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಸ್ತೆ ಗುಂಡಿಗಳನ್ನು ಗುಣಮಟ್ಟದೊಂದಿಗೆ ಮುಚ್ಚಲು, ಪ್ರಗತಿಯಲ್ಲಿರುವ ವೈಟ್ ಟಾಪಿಂಗ್ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಬೇಕು. ಪಾದಚಾರಿಗಳ ಮಾರ್ಗಗಳ ಒತ್ತುವರಿ ತೆರವುಗೊಳಿಸಲು, ರಸ್ತೆ ಮೇಲೆ ಅಳವಡಿಸಿರುವ ಅನಧಿಕೃತ ಕೇಬಲ್ ತೆರವುಗೊಳಿಸಲು ಸೂಚನೆ ನೀಡಿದರು.
ಅನಧಿಕೃತವಾಗಿ ರಸ್ತೆ ಅಗೆಯುವುದನ್ನು ತಡೆಯಲು ಹಾಗೂ ಅವರಿಗೆ ದಂಡ ವಿಧಿಸಲು, ಪಾದಚಾರಿ ಮಾರ್ಗಗಳ ದುರಸ್ತಿ, ರಸ್ತೆ ಬದಿ/ಖಾಲಿ ಜಾಗ/ಪಾದಚಾರಿ ಮಾರ್ಗಗಳಲ್ಲಿ ತ್ಯಾಜ್ಯ ಹಾಕಿರುವುದರಿಂದ ಉಂಟಾಗುವ ಬ್ಲಾಕ್ ಸ್ಪಾಟ್ ಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ಇದನ್ನೂ ಓದಿ: ಕರ್ನಾಟಕ ರಿಮೋಟ್ ಸೆನ್ಸಿಂಗ್ ಸೆಂಟರ್ ಸ್ಥಾಪಿಸಿದ ಮೊದಲ ರಾಜ್ಯ: ಪ್ರಿಯಾಂಕ್ ಖರ್ಗೆ
ವಿಧಾನಸೌಧ ಮುಂಭಾಗದ ರಸ್ತೆ ಹಾಗೂ ಬಹುಮಹಡಿ ಕಟ್ಟಡದ ಮುಂಭಾಗದ ರಸ್ತೆಗಳಲ್ಲಿನ ರಸ್ತೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯ ಸಮನ್ವಯದೊಂದಿಗೆ ಕೈಗೊಳ್ಳಲು ಸೂಚಿಸಿದರು.
ರಸ್ತೆ ಅಗೆತವನ್ನು ಸ್ಥಗಿತಗೊಳಿಸಿ
ಕಮರ್ಷಿಯಲ್ ಸ್ಟ್ರೀಟ್ 3ನೇ ಕ್ರಾಸ್ ನ ನಾರಾಯಣ್ ಪಿಳೈ ರಸ್ತೆಯಲ್ಲಿ ಅನಧಿಕೃತವಾಗಿ ರಸ್ತೆ ಅಗೆದು ಕೇಬಲ್ ಅಳವಡಿಕೆ ಮಾಡುತ್ತಿರುವುದನ್ನು ಗಮನಿಸಿದ ಅವರು ಕೂಡಲೇ ರಸ್ತೆ ಅಗೆಯುವುದನ್ನು ಸ್ಥಗಿತಗೊಳಿಸಲು ಹಾಗೂ ಸಂಬಂಧಪಟ್ಟವರ ಮೇಲೆ ಕ್ರಮ ವಹಿಸಲು ಸೂಚಿಸಿದರು.
ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡ ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳನ್ನು ಸಂಬಂಧಿಸಿದ ಗುತ್ತಿಗೆದಾರರಿಂದಲೇ ತುರ್ತಾಗಿ ಗುಂಡಿ ಮುಚ್ಚುವ ಕಾಮಗಾರಿ ಕೈಗೊಳ್ಳಲು ಸೂಚಿಸಿದರು.
