ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಇತ್ತೀಚಿನ ದಿನಗಳಲ್ಲಿ ಜಾತಿ ಗಣತಿಯ ಬಗ್ಗೆ ಭಾರೀ ಚರ್ಚೆಯಾಗುತ್ತಿದ್ದು, ಈ ಕುರಿತು ಇದೀಗ ಸಚಿವರಾದ ಶಿವರಾಜ್ ತಂಗಡಗಿ ಅವರು ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಇಂದು (ಶನಿವಾರ ಸೆಪ್ಟೆಂಬರ್ 20) ರಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಾತಿ ಬಗ್ಗೆ ಚರ್ಚೆ ಮಾಡಿದರೆ ದೇಶ ಅವನತಿಯತ್ತ ಸಾಗುತ್ತದೆ ಎಂದು ಕಿಡಿಕಾರಿದ್ದಾರೆ. ಯಾರೇ ಆಗಲಿ ಜಾತಿಗಳ ಬಗ್ಗೆ ನಾವು ಚರ್ಚೆ ಮಾಡಬಾರದು. ಜಾತಿ ಬಗ್ಗೆ ಚರ್ಚೆ ಮಾಡಿದರೆ ದೇಶ ಅವನತಿಯತ್ತ ಸಾಗುತ್ತದೆ. ಪಾಕಿಸ್ತಾನ, ಬಾಂಗ್ಲಾದೇಶ ಹಾಳಾಗಿರುವುದೇ ಧರ್ಮದ ಚರ್ಚೆ ಮಾಡಿ ಎಂದು ಕಿಡಿಕಾರಿದರು.
ಆಯೋಗ ಸ್ವತಂತ್ರ ಸಂಸ್ಥೆ, ಅದರ ಮೇಲೆ ಒತ್ತಡ ಹೇರಲು ಆಗಲ್ಲ. ಯಾರೂ ಮಧ್ಯಪ್ರವೇಶ ಮಾಡಬಾರದು ಎಂದು ಸಿಎಂ ಹೇಳಿದ್ದಾರೆ. ಬಿಜೆಪಿಯವರಿಗೆ ಕೆಲಸ ಏನಿದೆ? ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಿ. ಗ್ಯಾರಂಟಿ ಬಡಜನರಿಗೆ ತಲುಪುತ್ತಿಲ್ಲ ಅಂದರೆ ಹೇಳಲಿ. ಮೋದಿ ಮುಂದೆ ಮಾತನಾಡುವ ತಾಕತ್ತು ಇವರಿಗೆ ಇಲ್ಲ. ಇಲ್ಲಿ ಮಸೀದಿ, ಧರ್ಮದ ಬಗ್ಗೆ ಮಾತನಾಡುತ್ತಾರೆ ಎಂದರು. ಇದನ್ನೂ ಓದಿ: ಮತದಾರ ಪ್ರಭುವಿನ ಮನೆ ಬಾಗಿಲಿಗೆ ಸರ್ಕಾರದ ಸವಲತ್ತು
ನಮ್ಮ ಸರ್ಕಾರ ಮಾಡುತ್ತಿರುವುದು ಜಾತಿಗಣತಿ ಅಲ್ಲ. ಶೈಕಣಿಕ, ಆರ್ಥಿಕ ಸಮೀಕ್ಷೆಯನ್ನು ನಾವು ಮಾಡುತ್ತಿದ್ದೇವೆ. ನಮಗೆ ಜಾತಿಗಣತಿ ಮಾಡುವ ಪವರ್ ಇಲ್ಲ. ಕೇಂದ್ರ ಸರ್ಕಾರಕ್ಕೆ ಜಾತಿಗಣತಿ ಮಾಡುವ ಪವರ್ ಇದೆ. ನಾವು ಸ್ಪಷ್ಟವಾಗಿ ಆದೇಶ ಹೊರಡಿಸಿದ್ದೇವೆ ಎಂದರು.
