ಕೊಪ್ಪಳ: ವಿಜಯಪುರ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಒಂದಲ್ಲ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಯಾಗುತ್ತಲೇ ಇರುತ್ತಾರೆ. ಕಳೆದ ಕೆಲವು ದಿನಗಳ ಹಿಂದೆ ಮದ್ದೂರಿನಲ್ಲಿ ಸಾರ್ವಜನಿಕವಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ದೂರು ದಾಖಲಾಗಿದ್ದು, ಮತ್ತೆ ಇದೀಗ ದಲಿತ ಮಹಿಳೆಯರಿಗೆ ಅವಮಾನಕರ ಹೇಳಿಕೆಯನ್ನು ಹೇಳಿರುವುದರಿಂದ ಯತ್ನಾಳ್ ಅವರ ವಿರುದ್ಧ ಕೊಪ್ಪಳದಲ್ಲಿ ಮತ್ತೊಂದು ದೂರು ದಾಖಲಾಗಿದೆ.
ಹೌದು, ಕಳೆದ 2 ದಿನಗಳ ಹಿಂದೆ ಯತ್ನಾಳ್ ಅವರು ಮಾಧ್ಯಮಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ, ಹಿಂದೂಗಳ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ಮಾಡಲಿರುವ ಬಾನು ಮುಷ್ತಾಕ್ ವಿರುದ್ಧ ಮಾತನಾಡುವ ಭರಾಟೆಯಲ್ಲಿ ಸನಾತನ ಧರ್ಮದವರು ಮಾತ್ರ ತಾಯಿ ಚಾಮುಂಡಿಗೆ ಹೂ ಮುಡಿಸಬೇಕು ಹೊರತು ಒಬ್ಬ ದಲಿತ ಮಹಿಳೆಗೂ ಅವಕಾಶ ಕೊಡಲ್ಲ ಎಂದು ಹೇಳಿಕೆ ನೀಡಿ ದಲಿತ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: BPL ಕಾರ್ಡ್ಗಳನ್ನ ರದ್ದು ಮಾಡಲ್ಲ: ಮುನಿಯಪ್ಪ
ಈ ಕುರಿತು ಕೊಪ್ಪಳ ನಗರದ ದಲಿತ ಸಂಘಟನೆಯ ಯುವ ಮುಖಂಡ ಮಲ್ಲಿಕಾರ್ಜುನ ಪೂಜಾರ ಅವರು ದೂರು ದಾಖಲಿಸಿದ್ದು, ಯತ್ನಾಳ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ದೂರಿನನ್ವಯ ಕೊಪ್ಪಳ ನಗರ ಠಾಣೆಯಲ್ಲಿ SC/ST ಕಾಯ್ದೆಯಡಿ ಜಾತಿನಿಂದನೆ ಪ್ರಕರಣ ದಾಖಲಾಗಿದೆ.
