ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಗಸಗಸೆ ಬೀಜಗಳು ಚಿಕ್ಕದಿದ್ದರೂ ಕೂಡ ಅದರ ಉಪಯೋಗಗಳು ಮಾತ್ರ ಮನುಷ್ಯನ ದೇಹಕ್ಕೆ ಅತ್ಯುತ್ತಮಕಾರಿ ಲಾಭಗಳನ್ನು ನೀಡುತ್ತದೆ. ಗಸಗಸೆ ಬೀಜವನ್ನು ಕ್ರಮೇಣವಾಗಿ ಆಹಾರದಲ್ಲಿ ಅಥವಾ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುತ್ತಾ ಹೋದರೆ ನಮ್ಮ ಆರೋಗ್ಯದಲ್ಲಿ ಇರುವಂತಹ ಹಲವಾರು ಸಮಸ್ಯೆಗಳಿಗೆ ಇದು ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ.
ಯೆಸ್…ಕಣ್ಣು ಉರಿ, ನಿದ್ರಾ ಹೀನತೆ, ಮಹಿಳೆಯರ ಬಂಜೆತನಕ್ಕೆ, ಆರೋಗ್ಯಕರ ಹೃದಯಕ್ಕೆ ಜೀರ್ಣಕ್ರಿಯೆಗೆ, ಹೀಗೆ ಹಲವಾರು ಸಮಸ್ಯೆಗಳಿಗೆ ಗಸಗಸೆ ಬೀಜಗಳು ಉತ್ತಮ ಎನ್ನಬಹುದು.
ಕಣ್ಣು ಉರಿ: ಸಾಮಾನ್ಯವಾಗಿ ಎಲ್ಲರಿಗೂ ಕಣ್ಣು ಉರಿ ಕಾಣಿಸುತ್ತದೆ. ಕಣ್ಣುಉರಿ ಕಾಣಿಸುವವರು ರಾತ್ರಿ ಹೊತ್ತು 2 ಚಮಚ ಗಸಗಸೆ ಬೀಜವನ್ನು ನೀರಿನಲ್ಲಿ ನೆನೆಸಿ ಬೆಳಗ್ಗೆ ಎದ್ದ ಕೂಡಲೇ ಅದನ್ನು ಮೊಸರಿನಲ್ಲಿ ರುಬ್ಬಿ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಕ್ರಮೇಣವಾಗಿ ಕಣ್ಣುಉರಿ ಅಥವಾ ಉಷ್ಣ ಇದ್ದರೆ ಕಡಿಮೆ ಆಗುತ್ತದೆ.
ದಪ್ಪಗಾಗಲು: ನೀವೇನಾದರೂ ತಳ್ಳಗಿದ್ದರೆ ಗಸಗಸೆ ಬೀಜ ಹಾಗೂ ಬಿಳಿ ಎಳ್ಳನ್ನು ರಾತ್ರಿ ಹೊತ್ತಿನಲ್ಲಿ ನೆನೆಸಿ ಬೆಳಿಗ್ಗೆ ಅದನ್ನು ನುಣ್ಣಗೆ ರುಬ್ಬಿಕೊಂಡು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ದಪ್ಪ ಆಗಬಹುದು.
ಒತ್ತಡ ನಿವಾರಣೆ: ಗಸಗಸೆಯ ಪಾನೀಯವನ್ನು ಸೇವಿಸುವುದರಿಂದ ಸ್ನಾಯುಗಳನ್ನು ಶಾಂತಗೊಳಿಸಲು ಮತ್ತು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿನ ಕಾರ್ಟಿಸೋಲ್ ಮಟ್ಟವನ್ನು ಅಂದರೆ ಒತ್ತಡದ ಹಾರ್ಮೋನ್ ಅನ್ನು ಕಡಿಮೆ ಮಾಡುತ್ತದೆ. ಈ ಮೂಲಕ ನಿಮಗೆ ನಿದ್ದೆ ಬರುವಂತೆ ಮಾಡುತ್ತದೆ. ಮಲಗುವ ಮುನ್ನ ಟೀ ಚಹಾ ಅಥವಾ ಹಾಲಿನೊಂದಿಗೆ ಸೇವಿಸಬಹುದು.
ಚರ್ಮದ ಕಾಂತಿ: ಗಸಗಸೆ ಬೀಜಗಳು ನಮ್ಮ ಚರ್ಮದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ಲಿನೋಲೆನಿಕ್ ಆಮ್ಲದ ಹೆಚ್ಚಿನ ಅಂಶವಿರುವುದರಿಂದ ಎಸ್ಜಿಮಾ ಚಿಕಿತ್ಸೆಗೆ ಸಹಾಯ ಮಾಡುತ್ತದೆ. ಇದು ಕೆಂಪು, ಉರಿಯೂತ ಮತ್ತು ತುರಿಕೆ ಕಡಿಮೆ ಮಾಡುತ್ತದೆ. ಇದು ಉತ್ತಮ ಮಾಯಿಶ್ಚರೈಸರ್ ಕೂಡ ಆಗಿದ್ದು ತ್ವಚೆಯನ್ನು ಮೃದುವಾಗಿ ಮತ್ತು ನಯವಾಗಿಡುತ್ತದೆ. ಈ ಮೂಲಕ ಸ್ಪಷ್ಟವಾದ ಮತ್ತು ಹೊಳೆಯುವ ಚರ್ಮವನ್ನು ಸಾಧಿಸಲು ಸಹಾಯ ಮಾಡುತ್ತದೆ.
ರೋಗನಿರೋಧಕ ಶಕ್ತಿ: ಗಸಗಸೆ ನಮ್ಮ ರೋಗನಿರೋಧಕ ವ್ಯವಸ್ಥೆಗೆ ಮುಖ್ಯವಾಗಿರುವ ಸತುವಿನ ಸಮೃದ್ಧ ಮೂಲವಾಗಿದೆ. ಇದು ನಮ್ಮ ಚಯಾಪಚಯ ಕ್ರಿಯೆಯನ್ನು ಬಲಪಡಿಸಿ, ಒಟ್ಟಾರೆ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ಉರಿಯೂತದ ಗುಣಲಕ್ಷಣಗಳು ಹಲವಾರು ದೀರ್ಘಕಾಲದ ಕಾಯಿಲೆಗಳಿಂದ ನಮಗೆ ರಕ್ಷಣೆ ನೀಡುತ್ತದೆ. ಇದು ಸಂಕೀರ್ಣ ಕಾರ್ಬೋಹೈಡ್ರೇಟ್ಗಳನ್ನು ಸಹ ಒದಗಿಸಿ, ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಆಯಾಸವನ್ನು ದೂರಮಾಡುವುದು.
ಬಂಜೆತನಕ್ಕೆ ಚಿಕಿತ್ಸೆ: ಗಸಗಸೆ ಸೇವನೆಯು ಮಹಿಳೆಯರಲ್ಲಿ ಬಂಜೆತನ ನಿವಾರಿಸಿ, ಫಲವತ್ತತೆ ಅಥವಾ ಸಂತಾನೋತ್ಪತ್ತಿ ಸಾಧ್ಯತೆಯನ್ನು ಹೆಚ್ಚಿಸಬಹುದು ಎಂದು ಅಧ್ಯಯನಗಳು ತೋರಿಸಿವೆ. ಜೊತೆಗೆ ಇದರ ಸೇವನೆಯು ಲೈಂಗಿಕ ಆರೋಗ್ಯವನ್ನು ಹೆಚ್ಚಿಸಿ, ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ. ಇದು ಅತ್ಯಂತ ಉಪಯುಕ್ತವಾದ ಪ್ರಯೋಜನಗಳಲ್ಲಿ ಒಂದಾಗಿದೆ.
