ಬೆಂಗಳೂರು: ನಾನು ಅಪ್ಪಟ ಕಾಂಗ್ರೆಸ್ಸಿಗ. ನಾನು ಹುಟ್ಟಿದ್ದು ಕಾಂಗ್ರೆಸ್ಸಿನಿಂದಲೇ. ನನ್ನ ಜೀವ ಇರೋವರೆಗೂ ನಾನು ಕಾಂಗ್ರೆಸ್ಸಿನಲ್ಲೇ ಇರುತ್ತೇನೆ. ನಾನು ಕಾಂಗ್ರೆಸ್ ಬಿಟ್ಟು ಯಾವ ಪಕ್ಷವನ್ನು ಕನಸಿನಲ್ಲೂ ಕೂಡ ಬಯಸುವುದಿಲ್ಲ. ಕಾಂಗ್ರೆಸ್ ಪಕ್ಷವನ್ನು ನಾನು ಮುಂದೆ ನಡೆಸಿಕೊಂಡು ಹೋಗುವ ಬಹುದೊಡ್ಡ ಹೊರೆಯನ್ನು ಹೊತ್ತಿದ್ದೇನೆ. ಹಾಗಾಗಿ ನಾನು ಕಾಂಗ್ರೆಸ್ಸನ್ನು ಯಾವತ್ತಿಗೂ ಬಿಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗ. ಜೀವ ಇರುವ ತನಕವೂ ಕಾಂಗ್ರೆಸ್ಸಿಗನಾಗಿಯೇ ಇರುತ್ತೇನೆ. ನನ್ನ ಜೀವ, ನನ್ನ ರಕ್ತ ಎಲ್ಲವೂ ಕಾಂಗ್ರೆಸ್. ನಾನೀಗ ಪಕ್ಷವನ್ನು ಮುನ್ನಡೆಸುತ್ತಿದ್ದೇನೆ. ಅದಕ್ಕೆ ಆಧಾರಸ್ತಂಭವಾಗಿ ನಿಲ್ಲುತ್ತೇನೆ.
ನಾನು ಪರೋಕ್ಷವಾಗಿ, ಪ್ರತ್ಯಕ್ಷವಾಗಿ ಯಾವುದೇ ರೀತಿಯಲ್ಲೂ ಬಿಜೆಪಿ ಹಾಗೂ ಆರ್ ಎಸ್ ಎಸ್ ಜೊತೆ ಕೈ ಜೋಡಿಸುವ ಪ್ರಮೇಯವೇ ಇಲ್ಲ. ನಾನು ಅಪ್ಪಟ ಕಾಂಗ್ರೆಸ್ಸಿಗ. ಜನತಾದಳ, ಬಿಜೆಪಿ ಬಗ್ಗೆ ಸಂಶೋಧನೆ ಮಾಡುತ್ತಿರುತ್ತೇನೆ. ಅದೇ ರೀತಿ ಆರ್ ಎಸ್ ಎಸ್ ಬಗ್ಗೆಯೂ ತಿಳಿದುಕೊಂಡಿದ್ದೇನೆ ಎಂದರು.
ಆರ್ ಎಸ್ ಎಸ್ ನಿಂದ ಶಿಕ್ಷಣ ಸಂಸ್ಥೆಗಳ ಮೇಲೆ ಹಣ ಹೂಡಿಕೆ
ನಾನು ಪ್ರತಿಯೊಂದು ರಾಜಕೀಯ ಪಕ್ಷಗಳ ಬಗ್ಗೆಯೂ ನನ್ನದೇ ಆದ ಸಂಶೋಧನೆ ನಡೆಸಿದ್ದೇನೆ. ಆರ್ ಎಸ್ ಎಸ್ ರಾಜ್ಯದಲ್ಲಿ ಹೇಗೆ ತನ್ನ ಸಂಘಟನೆ ಕಟ್ಟಿತು ಎಂಬುದು ನನಗೆ ತಿಳಿದಿದೆ. ಆರ್ ಎಸ್ ಎಸ್ ಪ್ರತಿ ತಾಲ್ಲೂಕು, ಜಿಲ್ಲೆ ಸೇರಿದಂತೆ ಎಲ್ಲಾ ಕಡೆ ಶಿಕ್ಷಣ ಸಂಸ್ಥೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಸಾಕಷ್ಟು ಹಣ ಹೂಡಿಕೆ ಮಾಡುತ್ತಿದೆ. ಮಕ್ಕಳನ್ನು ತಲುಪುವ ಕೆಲಸ ಮಾಡುತ್ತಿದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ನಾಯಕಿ ಮನೆ ಮೇಲೆ ಇಡಿ ರೈಡ್
ರಾಜಕೀಯವಾಗಿ ನಾವು ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ರಾಜಕೀಯ ವ್ಯಕ್ತಿಯಾದ ನಾನು ರಾಜಕೀಯ ಎದುರಾಳಿಗಳಲ್ಲಿ ಯಾರು ಸ್ನೇಹಿತರಿದ್ದಾರೆ, ಯಾರು ಶತ್ರುಗಳಿದ್ದಾರೆ ಎನ್ನುವುದನ್ನು ತಿಳಿಯಬೇಕಲ್ಲವೇ? ಆದ ಕಾರಣಕ್ಕೆ ಆರ್ ಎಸ್ ಎಸ್ ಇತಿಹಾಸ ತಿಳಿದುಕೊಂಡಿದ್ದೇನೆ ಎಂದರು.
ಕೆಲವೊಂದು ಸಂದರ್ಭದಲ್ಲಿ ಕೆಲವೊಂದು ಸಂಸ್ಥೆಗಳಲ್ಲಿ ಒಂದಷ್ಟು ಒಳ್ಳೆಯ ಗುಣಗಳಿರುತ್ತವೆ. ಅವುಗಳನ್ನೂ ನಾವು ಗಮನಿಸಬೇಕಲ್ಲವೇ? ನೇರವಾಗಿ, ದಿಟ್ಟವಾಗಿ ಮಾತನಾಡುವುದು ನಮ್ಮ ಗುಣ. ಬೇರೆಯವರಲ್ಲಿರುವ ಒಳ್ಳೆಯ ಗುಣಗಳನ್ನು ಗಮನಿಸಬೇಕು ಅದೇ ರೀತಿ ನಾವು ಮಾಡಿದ್ದೇವೆ ಎಂದು ಹೇಳಿದರು.
