ಬೆಂಗಳೂರು: ಕನ್ನಡ ಚಿತ್ರಗಳಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಿದ ಡಾ. ವಿಷ್ಣುವರ್ಧನ್ ರವರ ಸ್ಮಾರಕವನ್ನು ಆಗಸ್ಟ್ 8 ರಂದು ರಾತ್ರಿ ಸಂಪೂರ್ಣವಾಗಿ ತೆರವುಗೊಳಿಸಲಾಗಿತ್ತು.
ಹೌದು, ಆಗಸ್ಟ್ 8 ರಂದು ಅಭಿಮಾನ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ರವರ ಸ್ಮಾರಕವನ್ನು ಸಂಪೂರ್ಣವಾಗಿ ನೆಲಸಮನ ಮಾಡಿರುವುದರಿಂದ ಅಭಿಮಾನಿಗಳು ಎಲ್ಲೆಡೆ ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೆ ಅದೇ ಸ್ಥಳದಲ್ಲೇ ಮರುಸ್ಥಾಪನೆಗೆ ಒತ್ತಾಯ ವ್ಯಕ್ತವಾದರೂ, ಕಾನೂನು ತೊಡಕುಗಳ ಹಿನ್ನೆಲೆ ಪರ್ಯಾಯ ಮಾರ್ಗವನ್ನು ಅಭಿಮಾನಿಗಳೇ ಕಂಡುಕೊಂಡಿದ್ದಾರೆ.
ಇನ್ನು ಬೆಂಗಳೂರಿನ ಅಭಿಮಾನ ಸ್ಟುಡಿಯೋದಿಂದ 3 ಕಿಲೋಮೀಟರ್ ಅಂತರದಲ್ಲೇ ಹೊಸ ಸ್ಮಾರಕವನ್ನು ನಿರ್ಮಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ವಿಷ್ಣುವರ್ಧನ್ ಅಭಿಮಾನಿಯಾಗಿರುವ ನಟ ಕಿಚ್ಚ ಸುದೀಪ್ ಕೆಂಗೇರಿ ಬಳಿ ಅರ್ಧ ಎಕರೆ ಜಾಗವನ್ನು ನೀಡಿದ್ದು, ಅದೇ ಜಾಗದಲ್ಲಿ ನೂತನ ಸ್ಮಾರಕ ನಿರ್ಮಾಣಕ್ಕೆ ಸಿದ್ಧತೆ ಆರಂಭವಾಗಿದೆ. ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಹಾಗೂ ಸದಸ್ಯರ ನೇತೃತ್ವದಲ್ಲಿ ಅಭಿಮಾನಿಗಳ ಸಹಕಾರದೊಂದಿಗೆ ಸ್ಮಾರಕ ಕಟ್ಟುವ ಯೋಜನೆ ರೂಪಿಸಲಾಗಿದೆ. ಇದನ್ನೂ ಓದಿ: ಎಲ್ಲ ಗೊಂದಲಗಳಿಗೆ ಸಿಎಂ ಸಿದ್ದರಾಮಯ್ಯನವರೇ ಕಾರಣಕರ್ತರು: ವಿಜಯೇಂದ್ರ
ಇನ್ನು ಕಿಚ್ಚ ಸುದೀಪ್ ತಾವೇ ಸಮಾಧಿ ಮರುಸ್ಥಾಪನೆ ಮಾಡೋದಾಗಿ ಮಾತು ಕೊಟ್ಟಿದ್ದರು. ಅದರಂತೆ ಇದೀಗ ವಿಷ್ಣುಸೇನಾ ಸಮಿತಿಯ ಜೊತೆಗೂಡಿ ಕಿಚ್ಚ ಸುದೀಪ್ ಅರ್ಧ ಎಕರೆ ಜಾಗ ಕೊಟ್ಟಿದ್ದಾರೆ. ಆ ಜಾಗದಲ್ಲಿ ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಹಾಗೂ ಸದಸ್ಯರು ಸೇರಿ, ಎಲ್ಲಾ ಅಭಿಮಾನಿಗಳ ಸಹಾಯದಿಂದ ಸ್ಮಾರಕ ನಿರ್ಮಾಣ ಮಾಡುವ ಯೋಜನೆ ಸಿದ್ಧಮಾಡಿಕೊಂಡಿದ್ದಾರೆ. ಇದೇ ಬರುವ ಸೆ. 2ನೇ ತಾರೀಖು ಕಿಚ್ಚನ ಹುಟ್ಟುಹಬ್ಬಕ್ಕೆ ನೀಲನಕ್ಷೆ ರೆಡಿಯಾಗಲಿದ್ದು, ಅದರ ಪ್ರದರ್ಶನ ಮಾಡಲಿದೆ ವಿಷ್ಣುಸೇನೆ. ಜೊತೆಗೆ ಇದೇ ಬರುವ ಸೆ. 18ಕ್ಕೆ ವಿಷ್ಣುವರ್ಧನ್ವರ 75ನೇ ಜಯಂತೋತ್ಸವದ ದಿನದಂದೇ ನೂತನ ಸ್ಮಾರಕಕ್ಕೆ ಅಡಿಗಲ್ಲು ಹಾಕಲಾಗುತ್ತಿದೆ ಎಂದು ತಿಳಿದು ಬಂದಿದೆ.
