ಬೆಂಗಳೂರು: ಸಚಿವ ಕೆ.ಎನ್ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಗೊಳಿಸಿರುವುದರಿಂದ ವಿರೋಧ ಪಕ್ಷದ ನಾಯಕರು ಇಂದು ಅಧಿವೇಶನದಲ್ಲಿ ಸಚಿವ ಕೆ ಎನ್ ರಾಜಣ್ಣ ಅವರ ರಾಜೀನಾಮೆ ಕುರಿತು ಸರಿಯಾಗಿ ಉತ್ತರ ನೀಡಬೇಕೆಂದು ಪಟ್ಟು ಹಿಡಿದಿದ್ದರಿಂದ ಕೆಲಕಾಲ ಅಧಿವೇಶನದಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಯಾಗಿತ್ತು.
ವಿಧಾನಸಭೆಯ ಕಲಾಪ ಆರಂಭದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೊಕ್ ಸಚಿವ ರಾಜಣ್ಣ ಅವರ ಪದಚ್ಯುತಿಯನ್ನು ಪ್ರಸ್ತಾಪಸಿದರು. ನಿನ್ನೆ ಮಧ್ಯಾಹ್ನ ತಾವು ಈ ವಿಚಾರದ ಬಗ್ಗೆ ಕೇಳಿದಾಗ ಸಂಸದೀಯ ವ್ಯವಹಾರಗಳ ಸಚಿವರು ಮಾಧ್ಯಮಗಳಲ್ಲಿ ಬರುವುದನ್ನೆಲ್ಲಾ ಚರ್ಚೆ ಮಾಡಲಾಗುವುದಿಲ್ಲ ಎಂದಿದ್ದರು.
ಈಗ ರಾಜಪಾಲರೇ ನಿನ್ನೆ ಮಧ್ಯಾಹ್ನ 3 ಗಂಟೆಗೆ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಸಚಿವ ಸಂಪುಟದಿಂದ ರಾಜಣ್ಣ ಅವರನ್ನು ವಜಾಗೊಳಿಸಿರುವುದಾಗಿ ತಿಳಿಸಿದ್ದಾರೆ.
ವಿಧಾನ ಮಂಡಲ ಅಧಿವೇಶನ ನಡೆಯುತ್ತಿದೆ. ಸಚಿವರನ್ನು ಕೈಬಿಟ್ಟಿರುವ ಬಗ್ಗೆ ನಾವು ಮಾಧ್ಯಮಗಳಿಂದ ತಿಳಿದುಕೊಳ್ಳಬೇಕೆ? ಸದನಕ್ಕೆ ಮಾಹಿತಿ ನೀಡುವುದು ಸರ್ಕಾರದ ಜವಾಬ್ದಾರಿ ಅಲ್ಲವೆ? ನಮನ್ನು ಕತ್ತಲಿನಲ್ಲಿಡಲಾಗಿದೆ. ತಕ್ಷಣವೇ ಉತ್ತರ ನೀಡಬೇಕು ಯಾವ ಕಾರಣಕ್ಕೆ ರಾಜಣ್ಣ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ರಾಜಣ್ಣ ರಾಜೀನಾಮೆ ಅಂಗೀಕರಿಸಿದ ಸಿಎಂ
ಈ ಸಂದರ್ಭದಲ್ಲಿ ಸಭಾಧ್ಯಕ್ಷ ಯು.ಟಿ. ಖಾದರ್ ಆಂತರಿಕ ವಿಚಾರವನ್ನು ಚರ್ಚೆ ಮಾಡುವುದು ಅನಗತ್ಯ ಎಂದಾಗ, ವಿರೋಧ ಪಕ್ಷದ ಶಾಸಕರಾದ ಸುರೇಶ್‌ಕುಮಾರ್, ಸುನಿಲ್‌ಕುಮಾರ್ ಸೇರಿದಂತೆ ಎಲ್ಲರೂ ಎದ್ದು ನಿಂತು ಆಕ್ಷೇಪಿಸಿದರು. ಇದು ಸರ್ಕಾರಕ್ಕೆ ಸಂಬಂಧಪಟ್ಟ ವಿಚಾರ ಪಕ್ಷದ ಆಂತರಿಕ ವಿಚಾರವಲ್ಲ ಎಂದು ಪ್ರತ್ಯುತ್ತರಿಸಿದರು.
