ಬೆಂಗಳೂರು: ಆಡಳಿತದಲ್ಲಿ ಜನ ಸಾಮಾನ್ಯರು ಎಂಬ ಶಬ್ದವನ್ನು ಸದಾ ದೂರ ಇಟ್ಟು ಕೇವಲ ಶ್ರೀಮಂತ ವರ್ಗ ಮತ್ತು ಮನುವಾದಿಗಳ ಹಿತಾಸಕ್ತಿಗಾಗಿ ದುಡಿಯುವ ಬಿಜೆಪಿಗರು ಪ್ರಜಾಪ್ರಭುತ್ವದಲ್ಲಿ ಎಂದಿಗೂ ನಂಬಿಕೆ ಇಟ್ಟಿಲ್ಲ ಎನ್ನುವುದಕ್ಕೆ ಅವರು ಇಲ್ಲಿಯವರೆಗೂ ನಡೆದುಕೊಂಡು ಬಂದಿರುವ ರೀತಿಯೇ ಸಾಕ್ಷಿ ಎಂದು ಸಚಿವ ಡಾ. ಹೆಚ್ ಸಿ ಮಹದೇವಪ್ಪನವರು ಹೇಳಿದರು.
ಈ ಕುರಿತು ಮಾತನಾಡಿದ ಅವರು, ಪ್ರಜಾಪ್ರಭುತ್ವದ ಬಲವರ್ಧನೆಗಾಗಿ ಎಲ್ಲರಿಗೂ ” ಒಂದು ಮತ ಒಂದು ಮೌಲ್ಯ” ವ್ಯವಸ್ಥೆಯನ್ನು ಜಾರಿ ಮಾಡಿದ ಬಾಬಾ ಸಾಹೇಬರು ಎಲ್ಲರಿಗೂ ಮತದ ಮೂಲಕ ದೇಶದ ಆಡಳಿತದ ಗತಿಯನ್ನು ನಿರ್ಧರಿಸುವ ಅವಕಾಶವನ್ನು ನೀಡಿದರು.
ಆದರೆ ಚುನಾವಣೆಯಲ್ಲಿ ಹೇಗಾದರೂ ಗೆಲುವು ಸಾಧಿಸಬೇಕೆಂಬ ಕಾರಣಕ್ಕೆ ಸದಾ ನೈತಿಕ ಮಾರ್ಗ ಅನುಸರಿಸುವಂತಹ ಬಿಜೆಪಿಗರು ಕಳೆದ ಲೋಕಸಭಾ ಚುನಾವಣೆಯಲ್ಲಿ ವ್ಯಕ್ತಿಯ ಮತಗಳನ್ನೂ ಕದಿಯುವ ಮೂಲಕ ಪ್ರಜಾಪ್ರಭುತ್ವದ ವ್ಯಾಖ್ಯಾನವನ್ನು ಹಾಳು ಮಾಡಲು ಹೊರಟಿದ್ದು ಇಂತಹ ಅಪಾಯಕಾರಿ ನಡೆಯ ವಿರುದ್ಧ ಕಾಂಗ್ರೆಸ್ ಪಕ್ಷವು ತನ್ನ ಹೋರಾಟ ರೂಪಿಸಿದೆ.
ಸಹಜವಾಗಿ ಇರಬೇಕಿದ್ದ ಜನಾಂದೋಲನವನ್ನು ಅಸಹಜ ಪ್ರಕ್ರಿಯೆಗೆ ಕೊಂಡೊಯ್ಯುತ್ತಿರುವ ಬಿಜೆಪಿಗರು ಅತ್ಯಂತ ಹೀನಾಯ ಮತ್ತು ಅನ್ಯಾಯದ ಮಾರ್ಗಗಳ ಮೂಲಕವೇ ಪ್ರಜಾಪ್ರಭುತ್ವದ ಆಧಾರ ಸ್ಥಂಭ ಎನಿಸುವ ಪ್ರಕ್ರಿಯೆಯಾದ ಚುನಾವಣೆಯನ್ನು ಭ್ರಷ್ಟಗೊಳಿಸಿದ್ದಾರೆ.
ಸದಾ ದೇಶದ ಸಂವಿಧಾನ ಮತ್ತು ಬಹುತ್ವದ ಉಳಿವಿಗಾಗಿ ದನಿ ಎತ್ತುತ್ತಿರುವ ನಮ್ಮ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಇದೀಗ ಸಾಕ್ಷಿ ಸಮೇತ ದೇಶದ ಮುಂದೆ ಬಿಜೆಪಿಗರ ಕರಾಳ ಬಂಡವಾಳವನ್ನು ಬಿಚ್ಚಿಟ್ಟಿದ್ದು, ಚುನಾವಣಾ ಆಯೋಗವನ್ನು ಗಂಭೀರವಾಗಿ ಪ್ರಶ್ನಿಸುವ ಮೂಲಕ ಪ್ರಜಾಪ್ರಭುತ್ವದ ಉಳಿವಿನ ದೃಷ್ಟಿಯಲ್ಲಿ ತಮ್ಮ ಜವಾಬ್ದಾರಿಯನ್ನು ಮೆರೆದಿದ್ದಾರೆ. ಇದನ್ನೂ ಓದಿ: ದೇಶರಕ್ಷಣೆಗಾಗಿ ತ್ಯಾಗ, ಬಲಿದಾನಗೈದಿದ್ದು ಕಾಂಗ್ರೆಸ್ ಪಕ್ಷ: ಸಿಎಂ
ಇನ್ನು ಇವರೊಂದಿಗೆ ಇಡೀ ಕಾಂಗ್ರೆಸ್ ಪಕ್ಷವು ಕೈಜೋಡಿಸಿದ್ದು ದೇಶದ ಜನರ ನಂಬಿಕೆಯ ಪ್ರತೀಕವಾದ ಚುನಾವಣಾ ಪ್ರಕ್ರಿಯೆಯನ್ನು ಕಾಪಾಡುವ ಆದ್ಯ ಜವಾಬ್ದಾರಿಯನ್ನು ತೋರಿದೆ. ರಾಹುಲ್ ಗಾಂಧಿಯವರು ಚುನಾವಣಾ ಆಯೋಗದ ಕುರಿತು ದನಿ ಎತ್ತಿದ ಕೂಡಲೇ ಪಾರದರ್ಶಕವಾಗಿ ಇರಬೇಕಿದ್ದ ವಿವಿಧ ರಾಜ್ಯಗಳ ಚುನಾವಣಾ ವೆಬ್ ಸೈಟ್ ಅನ್ನು ಬಂದ್ ಮಾಡಲಾಗಿದ್ದು ಕಾಂಗ್ರೆಸ್ ನ ಆರೋಪಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ವರ್ತಿಸಿದೆ.
ದೇಶದ ಚುನಾವಣಾ ವ್ಯವಸ್ಥೆಯ ಮೇಲೆ ಪ್ರತ್ಯಕ್ಷ ಮತ್ತು ಪರೋಕ್ಷವಾದ ನಿಯಂತ್ರಣದ ಪ್ರಯತ್ನಗಳು ನಡೆಯುತ್ತಲೇ ಇದೆ. IT, ED ಮತ್ತು CBI ಗಳ ಮೂಲಕ ಎದುರಾಳಿ ಪಕ್ಷಗಳ ಮೇಲೆ ಚುನಾವಣಾ ಒತ್ತಡ ತರುತ್ತಿರುವ ಬಿಜೆಪಿಗರು, ಚುನಾವಣಾ ರಾಜಕೀಯದಲ್ಲಿ ತಮ್ಮ ಪ್ರಣಾಳಿಕೆ ಮತ್ತು ಸಾಧನೆಯನ್ನು ಮುಂದಿಡದೇ ಕೇವಲ ಧರ್ಮದ ಹೆಸರಲ್ಲಿ ಜಗಳ ಹಚ್ಚುವ ಕೆಲಸ ಮಾಡುವುದೂ ಕೂಡಾ, ಈ ಅನೀತಿಯ ಒಂದು ಭಾಗ.
ಇದರ ಜೊತೆಗೆ ಅತ್ಯಂತ ಕೆಟ್ಟ ರೀತಿಯಲ್ಲಿ ಆಪರೇಷನ್ ಕಮಲ ಮಾಡುವುದು, ಸೇರಿದಂತೆ ಹಲವು ರೀತಿಯ ಕೃತ್ಯಗಳನ್ನು ಎಸಗುವ ಬಿಜೆಪಿಗರು ಎಂದಿಗೂ ಕೂಡಾ ಪ್ರಜಾಪ್ರಭುತ್ವದ ರೀತಿ ನೀತಿಗಳಿಗೆ ವಿರುದ್ಧವಾಗಿಯೇ ನಡೆದುಕೊಳ್ಳುತ್ತುದ್ದು ಜನರ ಅಭಿಪ್ರಾಯಗಳನ್ನು ಅತ್ಯಂತ ಅಗೌರವದಿಂದ ನೋಡುತ್ತಿದ್ದಾರೆ.
ಇಂತಹ ಪ್ರಜಾಪ್ರಭುತ್ವ ವಿರೋಧಿ ಮನಸ್ಸುಗಳನ್ನು ನಿಯಂತ್ರಿಸಲು ಜನ ಜಾಗೃತಿ ಎಷ್ಟು ಮುಖ್ಯವೋ ಹೋರಾಟವೂ ಅಷ್ಟೇ ಮುಖ್ಯವಾಗಿದ್ದು, ನಮ್ಮ ಪಕ್ಷದ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಈ ಹೋರಾಟವು ಅತ್ಯಂತ ಪರಿಣಾಮಕಾರಿಯಾಗಿ ನಡೆಯಲಿದೆ ಎಂದರು.
