ಬೆಂಗಳೂರು: ಕಾಂಗ್ರೆಸ್ ಎಂದರೆ ಸತ್ಯ, ನ್ಯಾಯದ ಪರವಾದ, ಜಾತಿ, ಧರ್ಮ, ಸೀಮೆ ಮೀರಿದ ಒಂದು ಜನಚಳವಳಿ. ಭಾರತೀಯರ ಮೇಲೆ ಬ್ರಿಟಿಷರು ದೌರ್ಜನ್ಯ, ದಬ್ಬಾಳಿಕೆ ಮಾಡುವಾಗ ದೇಶವಾಸಿಗಳ ಪರವಾಗಿ ನಿಂತಿದ್ದು, ದೇಶರಕ್ಷಣೆಗಾಗಿ ತ್ಯಾಗ – ಬಲಿದಾನಗೈದಿದ್ದು ಕಾಂಗ್ರೆಸ್ ಪಕ್ಷ. ಸಾಮಾಜಿಕ ಅಸಮಾನತೆ ಮತ್ತು ಅನ್ಯಾಯಗಳ ವಿರುದ್ಧ ದಾರ್ಶನಿಕರು ನಡೆಸಿದ ಸಾಮಾಜಿಕ ನ್ಯಾಯದ ಚಳವಳಿಯನ್ನು ಕೂಡ ಮುನ್ನಡೆಸಿಕೊಂಡು ಹೋಗುತ್ತಿರುವ ಪಕ್ಷ ನಮ್ಮದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮತದಾನ ಅಕ್ರಮ ವಿರುದ್ಧ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೋಟ್ಯಂತರ ಭಾರತೀಯರ ನೂರಾರು ವರ್ಷಗಳ ಹೋರಾಟದ ಫಲವಾಗಿ ದೊರೆತಿರುವ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಇಂದು ಬಿಜೆಪಿಯ ಚುನಾವಣಾ ಅಕ್ರಮಗಳಿಂದಾಗಿ ಅಪಾಯದಲ್ಲಿ ಸಿಲುಕಿದೆ. ಈಗ ಮತ್ತೆ ಕಾಂಗ್ರೆಸ್ ಪಕ್ಷ ದೇಶರಕ್ಷಣೆಗಾಗಿ ಚಳವಳಿ ಆರಂಭಿಸಿದೆ. ಇದನ್ನೂ ಓದಿ: ಮೋದಿಗೆ ಪ್ರಧಾನಿ ಕುರ್ಚಿಯಲ್ಲಿ ಕೂರುವ ನೈತಿಕ ಹಕ್ಕಿಲ್ಲ: ಸಿಎಂ
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ನೀಡಲಾದ ಮತದಾನದ ಹಕ್ಕನ್ನೇ ವಂಚಿಸಲಾಗುತ್ತಿರುವ ಈ ಹೊತ್ತಿನಲ್ಲಿ ಪಕ್ಷಬೇಧ ಮರೆತು ಎಲ್ಲರೂ ಒಂದಾಗಬೇಕು. ಕಾಂಗ್ರೆಸ್ ಪಕ್ಷ ಈ ಹೋರಾಟದ ಮುಂದಾಳು ಮಾತ್ರ, ಇದು ಜನರ ಹೋರಾಟ, ಜನರ ಹಕ್ಕಿನ ಹೋರಾಟ. ಇದನ್ನು ದೇಶವ್ಯಾಪಿಯಾಗಿಸುವ ಹೊಣೆ ಪ್ರತಿ ಭಾರತೀಯನದ್ದು ಎಂದರು.
