ಬೆಂಗಳೂರು: ನಾನು ಈ ಕ್ಷೇತ್ರವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಪಕ್ಕದಲ್ಲೇ ಎಲೆಕ್ಟ್ರಾನಿಕ್ ಸಿಟಿ ಇದೆ. ಈ ಭಾಗದಲ್ಲಿ ಸರಿಯಾಗಿ ತೆರಿಗೆ ಪಾವತಿಯಾಗುತ್ತಿಲ್ಲ ಎಂದು ಇಲ್ಲಿನ ಶಾಸಕರಾದ ಕೃಷ್ಣಪ್ಪ ಅವರೂ ಸೇರಿದಂತೆ ಅನೇಕರು ದೂರು ನೀಡಿದ್ದಾರೆ. ನಮ್ಮ ಸರ್ಕಾರ ಬೆಂಗಳೂರಿಗೆ ಹೊಸ ರೂಪ ನೀಡುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಬೆಂಗಳೂರು ದಕ್ಷಿಣ ತಾಲ್ಲೂಕಿನ ದೊಡ್ಡತೋಗೂರು ಪಟ್ಟಣ ಪಂಚಾಯಿತಿ ಕಚೇರಿ ನೂತನ ಕಟ್ಟಡ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, ಸದ್ಯಕ್ಕೆ ದೊಡ್ಡತೋಗೂರು ಪಟ್ಟಣ ಪಂಚಾಯ್ತಿ ಎಂದು ಇರುವ ನಾಮಫಲಕ ಬೆಂಗಳೂರು ದಕ್ಷಿಣ ಪಾಲಿಕೆ ಎಂದು ಶೀಘ್ರದಲ್ಲೇ ಬದಲಾಗಲಿದೆ ಎಂಬ ವಿಶ್ವಾಸ ನನಗಿದೆ. ಬೆಂಗಳೂರು ನಗರ ಪ್ರದೇಶದಲ್ಲಿರುವ ನೀವು ಎಲ್ಲಾ ಮೂಲಭೂತ ಸೌಕರ್ಯ ಪಡೆಯಲು ಅರ್ಹರಿದ್ದೀರಿ ಎಂದರು.
ಬೆಂಗಳೂರು ನಗರದಲ್ಲಿದ್ದೇವೆ ಎಂಬ ಹಿರಿಮೆ ನಿಮಗೂ ಇರಬೇಕು. ಈ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ 28 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳಿಗೆ ಅನುಮತಿ ನೀಡಿದ್ದೇನೆ ಎಂದರು.
ಪಾಲಿಕೆ ಚುನಾವಣೆ ನಿಲ್ಲಿಸುವುದಿಲ್ಲ
ಗ್ರೇಟರ್ ಬೆಂಗಳೂರು ಸೇರಿದಂತೆ ಯಾವುದೇ ಅಭಿವೃದ್ದಿ ಕೆಲಸಗಳನ್ನು ಚುನಾವಣಾ ದೃಷ್ಟಿಯಿಂದ ಮಾಡುತ್ತಿಲ್ಲ. ಈಗಾಗಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿಧೇಯಕ ಅಂಗೀಕಾರವಾಗಿದೆ. ಇದರಡಿ ಐದು ಪಾಲಿಕೆ ಮಾಡಲು ತೀರ್ಮಾನಿಸಲಾಗಿದ್ದು, ಇವುಗಳಿಗೆ ಚುನಾವಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಕೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಚುನಾವಣೆ ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.
ಅಕ್ಟೋಬರ್ 31 ರ ಹೊತ್ತಿಗೆ ಪಾಲಿಕೆಗಳಲ್ಲಿ ಎಷ್ಟು ವಾರ್ಡ್ ಗಳು ಇರಬೇಕು ಎಂಬುದು ಸೇರಿದಂತೆ ಅಂತಿಮ ರೂಪುರೇಷೆ ನಿರ್ಧಾರವಾಗುತ್ತದೆ. ಈ ಮಧ್ಯೆ ಶಾಸಕರು ಹಾಗೂ ನಮ್ಮ ಮುಖಂಡರು ಈ ಭಾಗವನ್ನೂ ಗ್ರೇಟರ್ ಬೆಂಗಳೂರಿಗೆ ಸೇರಿಸಬೇಕು ಎಂದು ಒತ್ತಡ ಹಾಕುತ್ತಿದ್ದಾರೆ. ಇದು ಬಹಳ ಅವಶ್ಯವಾಗಿದೆ. ಆನೇಕಲ್ ಶಾಸಕ ಶಿವಣ್ಣ, ರಮೇಶ್ ಹಾಗೂ ಮಾಜಿ ಸಂಸದ ಸುರೇಶ್ ಅವರು ಅನೇಕ ಬಾರಿ ನನ್ನ ಬಳಿ ಪ್ರಸ್ತಾಪ ಮಾಡಿದ್ದಾರೆ. ಇದಕ್ಕೆ ಈಗಾಗಲೇ ನೀಲನಕ್ಷೆ ರೂಪಿಸಿದ್ದೇವೆ ಎಂದರು. ಇದನ್ನೂ ಓದಿ: ಮೆಟ್ರೋ ಎಲ್ಲೋ ಲೈನ್ ಲೋಕಾರ್ಪಣೆ, ಇದು 8 ಲಕ್ಷ ಜನರಿಗೆ ಅನುಕೂಲ
ನಿಮ್ಮ ಭಾಗದಲ್ಲೂ ಶೀಘ್ರದಲ್ಲೇ ಚುನಾವಣೆ ಮಾಡಲಾಗುವುದು. ಪಾಲಿಕೆಗಳು ಹಾಗೂ ಈ ಹೊಸ ಪಟ್ಟಣ ಪಂಚಾಯ್ತಿ ಇನ್ನು ಮುಂದೆ ಜೊತೆಯಾಗಿ ಸಮಾನವಾಗಿ ಮುಂದೆ ಸಾಗಬೇಕು. ಮುಂದೆ ನಿಮ್ಮನ್ನು ಬೆಂಗಳೂರು ದಕ್ಷಿಣ ವ್ಯಾಪ್ತಿಯ ಪಾಲಿಕೆಗೆ ಸೇರಿಸಿಕೊಳ್ಳಲಾಗುತ್ತದೆ. ನಿಮ್ಮನ್ನು ದೂರ ಇಡಲು ಆಗುವುದಿಲ್ಲ ಎಂದು ಹೇಳಿದರು.
