ಬೆಂಗಳೂರು: ಇತ್ತೀಚಿಗೆ ಮಹಿಳೆಯರಿಗೆ ಕೆಲಸ ಮಾಡುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಹೆಚ್ಚಾಗುತ್ತಿರುವುದರಿಂದ ರಾಜ್ಯ ಸರ್ಕಾರ ಇದನ್ನು ತಡೆಗಟ್ಟಲು ಮಹತ್ವದ ಆದೇಶವನ್ನು ಹೊರಡಿಸಿದೆ.
ಹೌದು, 2013ರ “ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ, ನಿಷೇಧ ಮತ್ತು ನಿವಾರಣೆಗೆ ಸಂಬಂಧಿಸಿದ ಕಾಯ್ದೆ“ಯನ್ನು ಅನುಷ್ಠಾನಗೊಳಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ. ಶಮ್ಲಾ ಇಕ್ಬಾಲ್ ಅಧಿಕಾರಿಗಳಿಗೆ ನಿಗದಿತ ಸೂಚನೆಗಳನ್ನು ನೀಡಿದ್ದಾರೆ.
ಸಚಿವಾಲಯ ಹಾಗೂ ಎಲ್ಲಾ ಇಲಾಖೆಗಳಲ್ಲೂ ಈ ಕಾಯ್ದೆಯ ಅನುಷ್ಠಾನಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲು ಸೂಚನೆ ನೀಡಲಾಗಿದೆ. ಜೊತೆಗೆ, ಇಲಾಖೆಯ ಅಧೀನದಲ್ಲಿರುವ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳ ಮಾಹಿತಿ ಮತ್ತು ಆಂತರಿಕ ದೂರು ಸಮಿತಿಯ ವಿವರಗಳನ್ನು She-Box ಪೋರ್ಟಲ್ನಲ್ಲಿ ದಾಖಲಿಸುವುದು ಕಡ್ಡಾಯಗೊಳಿಸಲಾಗಿದೆ.
ಪ್ರತಿ ದೂರುದಾರರಿಗೆ ತಕ್ಷಣ ಸ್ಪಂದನೆ
ಪೋರ್ಟಲ್ ಅಥವಾ ನೇರವಾಗಿ ಬಂದ ದೂರುಗಳ ವಿಲೇವಾರಿ ಪ್ರಕ್ರಿಯೆ ವೇಗವಾಗಿ ಮತ್ತು ಸಮರ್ಪಕವಾಗಿ ನಡೆಯುವಂತೆ ಮೇಲ್ವಿಚಾರಣೆ ಮಾಡಬೇಕೆಂದು ಸೂಚಿಸಲಾಗಿದೆ.
ಪ್ರತಿ ಇಲಾಖೆಯಲ್ಲಿ ಲೈಂಗಿಕ ಕಿರುಕುಳ ತಡೆಯ ಕುರಿತಾಗಿ ನಿಯಮಿತವಾಗಿ ಪರಿಶೀಲನಾ ಸಭೆಗಳನ್ನು ನಡೆಸುವುದು, ಹಾಗೂ ಸಂಬಂಧಿತ ನೋಡಲ್ ಅಧಿಕಾರಿಗಳು ತಮ್ಮ ವಿಭಾಗದ ಮಾಹಿತಿ ಪೋರ್ಟಲ್ನಲ್ಲಿ ನಿರಂತರವಾಗಿ ನವೀಕರಿಸಬೇಕು.
ಇನ್ನು ಆಂತರಿಕ ದೂರು ಸಮಿತಿಯನ್ನು ರಚಿಸದಿರುವ ಯಾವುದೇ ಅಧೀನ ಕಚೇರಿ ಅಥವಾ ಸಂಸ್ಥೆಗಳಲ್ಲಿ ತುರ್ತಾಗಿ ಸಮಿತಿಯನ್ನು ರಚಿಸಲು ಸೂಚನೆ ನೀಡಲಾಗಿದೆ. ಈ ಕ್ರಮಗಳು ಮಹಿಳೆಯರು ಸುರಕ್ಷಿತವಾಗಿ ಮತ್ತು ಆತ್ಮವಿಶ್ವಾಸದಿಂದ ಕೆಲಸ ಮಾಡಲಿಕ್ಕಾಗಿ ನೀಡಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
