ಕಲಬುರಗಿ: ಕೆಕೆಆರ್ಡಿಬಿ ಕ್ರಿಯಾ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ ಬೇಗ ಅನುಮೋದನೆ ಸಿಕ್ಕಿರೋದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಗತಿಗೆ ಹಿದೆಂದಿಗಿಂತಲೂ ಹೆಚ್ಚಿನ ವೇಗ ದೊರಕಲಿದೆ ಎಂದು ಕೆಕೆಆರ್ಡಿಬಿ ಅಧ್ಯಕ್ಷ ಡಾ. ಅಜಯ್ ಧರಂಸಿಂಗ್ ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿ) 2025- 26 ನೇ ಸಾಲಿನ 5 ಸಾವಿರ ಕೋಟಿ ರು ಮೊತ್ತದ ಕ್ರಿಯಾ ಯೋಜನೆಗೆ ರಾಜ್ಯಪಾಲರಾದ ಥಾವರಚಂದ್ ಗೆಲ್ಹೋಟ್ ಅವರು ಜುಲೈ 24 ರಂದು ಅನುಮೋದನೆ ನೀಡಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಕೆಕೆಆರ್ಡಿಬಿ ಅಧ್ಯಕ್ಷರು, ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್ ಧರ್ಮಸಿಂಗ್ ಅವರು, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮಂಡಳಿಯ ಕ್ರಿಯಾ ಯೋಜನೆಗೆ ಸಂಪೂರ್ಣ ಒಪ್ಪಿಗೆ ಸೂಚಿಸಿ ರಾಜಭವನಕ್ಕೆ ರಾಜಭವನಕ್ಕೆ ಸದರಿ ಕ್ರಿಯಾ ಯೋಜನೆ ಕಡತ ರವಾನಿಸಿದ್ದರು. ಇದೀಗ ರಾಜ್ಯಪಾಲರು ತ್ವರಿತವಾಗಿ ಅಂಕಿತ ಹಾಕಿದ್ದಾರೆ. ಈ ಬೆಳವಣಿಗೆಯಿಂದಾಗಿ ಕಲ್ಯಾಣ ಭಾಗದಲ್ಲಿ ಮಂಡಳಿ ಇನ್ನೂ ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೇಶದ ಪ್ರತಿ ನಾಗರಿಕನ ಆರ್ಥಿಕ ಸಾಮಾಜಿಕ ಸ್ಥಿತಿಗತಿಯ ಮಾಹಿತಿ ಅತ್ಯಗತ್ಯ: ಸಿಎಂ
2023- 24 ರ ಸಾಲಿನ ಕ್ರಿಯಾ ಯೋಜನೆಗೆ ರಾಜ್ಯಪಾಲರು ಡಿಸೆಂಬರ್ನಲ್ಲಿ ಅನುಮೋದನೆ ನೀಡಿದ್ದರು. ಈ ಸಾಲಿನಲ್ಲಿ ಮಂಜಳಿಯ ಸಭೆ ಆಗಸ್ಟ್ 29 ರಂದು ನಡೆಸಲಾಗಿತ್ತು. ಆದಾಗ್ಯೂ ಮಾರ್ಚ್ 31 ರೊಳಗಾಗಿ ಕೆಕೆಆರ್ಡಿಬಿಯಿಂದ 2009 ಕೋಟಿ ರು ವೆಚ್ಚದಲ್ಲಿ ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ ಸೇರಿದಂತೆ ಹಲವು ರಂಗಗಳಲ್ಲಿ ಯೋಜನೆಗಳನ್ನು ಕೈಗೆತ್ತಿಕೊಂಡು ಅನುಷ್ಠಾನ ಗೊಳಿಸಲಾಗಿತ್ತು.
2024- 25 ನೇ ಸಾಲಿನಲ್ಲಿ ಜುಲೈ ತಿಂಗಳ 1 ರಂದೇ ಮಂಡಳಿಯ ಸಭೆ ನಡೆಸಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಲ್ಲಿಸಿದಾಗ ಸದರಿ ಕ್ರಿಯಾ ಯೋಜನೆಗೆ ರಾಜ್ಯಪಾಲರು ಆಗಸ್ಟ್ ತಿಂಗಳಲ್ಲಿ ಅನುಮೋದನೆ ನೀಡಿದ್ದರು.
ಈ ಬಾರಿ 2025- 26 ನೇ ಸಾಲಿನ ಮಂಡಳಿಯ ಸಭೆಯನ್ನು ಶಾಸಕರು, ಸಂಸದರು, ಮಂತ್ರಿಗಳು ಒಳಗೊಂಡೆತೆ ಮೇ ತಿಂಗಳ 10 ರಂದೇ ನಡೆಸಿ ಸಿದ್ಧಪಡಿಸಿದ್ದ 5 ಸಾವಿರ ಕೋಟಿ ರುಪಾಯಿ ಕ್ರಿಯಾ ಯೋಜನೆಗೆ ರಾಜ್ಯಪಾಲರಾದ ಥಾವರಚಂಗ್ ಗೆಲ್ಹೋಟ್ ಅವರು ಜುಲೈ 3 ನೇ ವಾರದಲ್ಲೇ ಅನುಮೋದನೆ ನೀಡಿದ್ದಾರೆ. ಇದರಿಂದಾಗಿ ಮಂಡಳಿಯಿಂದ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಕೊಳ್ಳಲು ಹೆಚ್ಚಿನ ಅನುಕೂಲವಾದಂತಾಗಿದೆ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.
