ಬೊಮ್ಮನಹಳ್ಳಿ: ಪರಿಸರ ಸಂರಕ್ಷಣೆ ಹೆಸರಿನಲ್ಲಿ ಕ್ಷೇತ್ರದ ಜನತೆಯ ಕೆಂಗೆಣ್ಣಿಗೆ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ಉಮಾಪತಿಗೌಡ ಹಾಗೂ ಹೆಚ್.ಎಸ್.ಆರ್ ಲೇಔಟ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಘವೇಂದ್ರ ಗುರಿಯಾಗಿದ್ದಾರೆಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಸತೀಶ್ ರೆಡ್ಡಿ ನುಡಿದರು.
ಇಂದು (ಜುಲೈ 18 ಶುಕ್ರವಾರ) ಗೃಹ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕರು, ಜುಲೈ 16 ರಂದು ಹೆಚ್‌ಎಸ್‌ಆರ್ ಬಡಾವಣೆಯ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮ ವಿಫಲವಾಗಿದೆ. ಹತ್ತು ಸಾವಿರ ಸಸಿ ನೆಡುವ ಗುರಿಯನ್ನಿಟ್ಟುಕೊಂಡು ಕ್ಷೇತ್ರದಾದ್ಯಂತ ಫ್ಲೆಕ್ಸಿ ಬ್ಯಾನರ್‌ಗಳನ್ನು ಕಟ್ಟಿ ಪರಿಸರ ಹದಗೆಡಿಸುವಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರುಗಳು ಕೊಡುಗೆ ನೀಡಿದ್ದಾರೆಂದು ಶಾಸಕರು ಕಿಡಿಕಾರಿದರು.
ಉಮಾಪತಿ ಗೌಡ ತನ್ನ ಉಳಿವಿಗಾಗಿ ಸಾರ್ವಜನಿಕರು ತನ್ನನ್ನು ಮರೆತು ಹೋಗುತ್ತಿದ್ದಾರೆಂಬ ಭೀತಿಯಿಂದ ರಾಜಕಾರಣದಲ್ಲಿ ತಾನು ಸಕ್ರಿಯನಾಗಿದ್ದೇನೆಂಬ ತೋರ್ಪಡಿಕೆಗೋಸ್ಕರ ಕಾರ್ಯಕ್ರಮ ಆಯೋಜಿಸಿದ್ದರು. ಅಷ್ಟೇ ಅಲ್ಲದೆ ಅರಣ್ಯ ಇಲಾಖೆಯಿಂದ, ಸರ್ಕಾರಿ ಕಾರ್ಯಕ್ರಮವೆಂದು ಬಿಂಬಿಸಿ, ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ಸದಸ್ಯರನ್ನು ಆಹ್ವಾನಿಸಿದ್ದರು. ಇದನ್ನೂ ಓದಿ: ಈಜೀಪುರ ಮೇಲ್ಸೇತುವೆ ಕಾಮಗಾರಿ ಬಗ್ಗೆ ಮಹೇಶ್ವರ್ ರಾವ್ ಹೇಳಿದ್ದೇನು?
ಈ ಕಾರ್ಯಕ್ರಮಕ್ಕೆ ಕ್ಷೇತ್ರದ ಜನತೆ ಸ್ಪಂದಿಸದ ಕಾರಣ ತರಾತುರಿಯಾಗಿ ಕಾರ್ಯಕ್ರಮಕ್ಕೆ ಸರ್ಕಾರಿ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಒತ್ತಾಯ ಪೂರ್ವಕವಾಗಿ ಕರೆಸಿಕೊಂಡಿದ್ದರು. ಈ ವಿಷಯವನ್ನು ಗುಪ್ತಚರ ಇಲಾಖೆ ಮುಲಕ ಮಾಹಿತಿ ಪಡೆದ ಮುಖ್ಯಮಂತ್ರಿಗಳು ಕಾರ್ಯಕ್ರಮವನ್ನು ರದ್ದುಪಡಿಸಿದ್ದಷ್ಟೇ ಅಲ್ಲದೆ, ಈ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿದರು.
ಕಾರ್ಯಕ್ರಮದ ನಂತರ ಸಾವಿರಾರು ಸಸಿಗಳು ಅನಾಥವಾಗಿ ಮೈದಾನದಲ್ಲಿ ಬಿದ್ದಿದ್ದು, ಯಾರೂ ಸಹ ಆ ಕಡೆ ಗಮನಹರಿಸದೇ ಇರುವುದು ವಿರ‍್ಯಾಸವೇ ಸರಿ. ಪರಿಸರ ಸಂರಕ್ಷಣೆ ಹೆಸರಿನಲ್ಲಿ ಪರಿಸರವನ್ನು ಹಾಳುಗೆಡವಿದ್ದಾರೆಂದು ಪರಿಸರವಾದಿಗಳು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಪರಿಸರವಾದಿಗಳು, ಸಾರ್ವಜನಿಕರ ದೂರಿನ ಮೇರೆಗೆ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಅನಾಥವಾಗಿ ಬಿದ್ದಿರುವ ಸಾವಿರಾರು ಸಸಿಗಳನ್ನು ಪರಿಸರವಾದಿ ಯಲ್ಲಪ್ಪ ಹಾಗೂ ಹೆಚ್.ಎಸ್.ಆರ್ ಬಡಾವಣೆ ವೆಲ್‌ಫೇರ್ ಅಸೋಸಿಯೇಷನ್ ಸದಸ್ಯರೊಂದಿಗೆ ಪರಿಶೀಲಿಸಿ ಕ್ಷೇತ್ರದ ಜನತೆಗೆ ತಲುಪಿಸುವ ಕರ‍್ಯವನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಹೆಚ್‌ಎಸ್‌ಆರ್ ಬಿಡಿಎ ಕಾಂಪ್ಲೆಕ್ಸ್ ಖಾಸಗೀಕರಣ : ಕಾಂಗ್ರೆಸ್ಸಿಗರ ಬಂಡತನ
ಹೆಚ್.ಎಸ್.ಆರ್ ಬಡಾವಣೆಯ ಪ್ರತಿಷ್ಠಿತ ಬಿಡಿಎ ಕಾಂಪ್ಲೆಕ್ಸ್ ಖಾಸಗಿಕರಣ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ತನ್ನ ಬಂಡತನವನ್ನು ಮುಂದುವರೆಸುತ್ತಿದೆ. ಹಲವಾರು ವರ್ಷಗಳಿಂದ ಬಿಡಿಎ ಕಾಂಪ್ಲೆಕ್ಸ್ ಕಟ್ಟಡ ತೆರವು ಕಾರ್ಯಕ್ರಮವನ್ನು ಶಾಸಕನಾಗಿ ಹಲವಾರು ಭಾರಿ ವಿಧಾನಸೌದದಲ್ಲಿ ಹಾಗೂ ಸಚಿವರಿಗೆ ಮನವಿ ಮಾಡಿ ಸಾರ್ವಜನಿಕರ ಹಿತದೃಷ್ಟಿಯಿಂದ ಕಾನೂನು ಹೋರಾಟ ನಡೆಸಲಾಗುತ್ತಿದೆ ಎಂದರು.
ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ್ ಗೌಡ ಹೆಚ್.ಎಸ್.ಆರ್ ವಾರ್ಡ್ ಎಳ್ಳುಕುಂಟೆಯಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಮಾಡಲು ಮೀಸಲಿಟ್ಟಿರುವ ಬಿಡಿಎ ಸ್ಥಳವನ್ನು ಅಕ್ರಮವಾಗಿ ತನ್ನ ಹೆಸರಿಗೆ ಮಾಡಿಸಿಕೊಳ್ಳುವ ಉದ್ದೇಶದಿಂದ ಅಧಿಕಾರ ದರ್ಪದಿಂದ ಅಧಿಕಾರಿಗಳನ್ನು ನಿಯೋಜಿಸುವ ಮೂಲಕ ಜಾಗವನ್ನು ಕಬಳಿಸುವ ಯತ್ನ ಮಾಡುತ್ತಿದ್ದು ಈ ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿದರು. ಈಗಾಗಲೆ ಹಲವಾರು ಸರ್ಕಾರಿ ಭೂಮಿಯನ್ನು ತನ್ನ ಹಾಗೂ ಕುಟುಂಬದವರ ಹೆಸರಿನಲ್ಲಿ ಅಕ್ರಮವಾಗಿ ಅಧೀನದಲ್ಲಿಟ್ಟುಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸ್ವತ್ತುಗಳನ್ನು ಆಕ್ರಮಿಸಿಕೊಂಡಿದ್ದಾರೆಂದು ಗಂಭೀರ ಅರೋಪ ಮಾಡಿದರು.
ಈ ಸಂದರ್ಭದಲ್ಲಿ ಹೆಸ್‌ಎಸ್‌ಆರ್ ವೆಲ್‌ಫೇರ್ ಅಸೋಸಿಯೇಷನ್ ಪದಾಧಿಕಾರಿಗಳು, ಪರಿಸರವಾದಿಗಳು, ಸಾರ್ವಜನಿಕರು, ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.
