ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆತುರದಲ್ಲೂ ಇಲ್ಲ, ಆತಂಕದಲ್ಲೂ ಇಲ್ಲ ಎಂದು ಬಮೂಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್ ಅವರು ಸ್ಪಷ್ಟಪಡಿಸಿದರು.
ಸದಾಶಿವನಗರ ನಿವಾಸದಲ್ಲಿ ಶನಿವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸುರೇಶ್ ಅವರು ಪ್ರತಿಕ್ರಿಯೆ ನೀಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಜಗಳವಿಲ್ಲ. ಕಾಂಗ್ರೆಸ್ ಪಕ್ಷದ ವರಿಷ್ಠರು, ಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಆಗಿರುವ ಡಿ.ಕೆ. ಶಿವಕುಮಾರ್ ಅವರು ಕೂಡ ಈಗಾಗಲೇ ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದು, ಸಿದ್ದರಾಮಯ್ಯ ಅವರು ನಾಯಕತ್ವದಲ್ಲಿ ಮುಂದುವರಿಯಲಿದ್ದಾರೆ ಎಂದು ಹೇಳಿದ್ದಾರೆ. ಆದರೂ ಮಾಧ್ಯಮಗಳಿಗೆ ಯಾಕೆ ಗೊಂದಲವಿದೆ ಎಂದು ಗೊತ್ತಿಲ್ಲ. ಶಿವಕುಮಾರ್ ಅವರು ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಪಕ್ಷದ ಕಾರ್ಯಕರ್ತನಾಗಿ ಮುನ್ನಡೆಸುತ್ತಿದ್ದಾರೆ. ಪಕ್ಷದ ಸೂಚನೆಯಂತೆ ಅವರು ಕೆಲಸ ಮಾಡುತ್ತಿದ್ದಾರೆ. ಇದರ ಹೊರತಾಗಿ ಹೆಚ್ಚಿನ ವಿಚಾರ ಏನೂ ಇಲ್ಲ. ಸಧ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಪದೇ ಪದೆ ಈ ವಿಚಾರ ಯಾಕೆ ಚರ್ಚೆಯಾಗುತ್ತಿದೆ ಗೊತ್ತಿಲ್ಲ ಎಂದರು.
ಸಿದ್ದರಾಮಯ್ಯ ಅವರು ಹಿರಿಯ ನಾಯಕರು. ರಾಜಕೀಯದಲ್ಲಿ ನಿವೃತ್ತಿ ಇಲ್ಲ. ರಾಜಕೀಯ ಇಚ್ಛಾಶಕ್ತಿ ಇರಬೇಕು. ಮುಖ್ಯಮಂತ್ರಿಗಳಿಗೆ ಇಚ್ಛಾಶಕ್ತಿ ಇದೆ. ಹೀಗಾಗಿ ಅವರು ಕೆಲವು ವಿಚಾರವನ್ನು ನಿಮ್ಮ ಜೊತೆ ಹಂಚಿಕೊಂಡಿರಬಹುದು ಎಂದು ತಿಳಿಸಿದರು.
ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ
ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಶಾಸಕರ ಬೆಂಬಲ ಕೇಳುವ ಸಮಯವಲ್ಲ. ಸಿದ್ದರಾಮಯ್ಯ ಅವರು 2 ವರ್ಷಗಳಿಂದ ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಅವರು ಮುಂದುವರಿಯುತ್ತಿರುವಾಗ ಈ ವಿಚಾರ ಚರ್ಚೆಯಾಗುತ್ತಿರುವ ಬಗ್ಗೆ ನಮಗೆ ಗೊತ್ತಿಲ್ಲ. ನೀವು ಈ ವಿಚಾರ ಚರ್ಚೆ ಮಾಡುತ್ತಿರುವವರನ್ನೇ ಕೇಳಿ. ಶಿವಕುಮಾರ್ ಅವರದ್ದು ಬಲಾಬಲ ಪ್ರದರ್ಶನ ಮಾಡುವ ವ್ಯಕ್ತಿತ್ವವಿಲ್ಲ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ. ಕಾಂಗ್ರೆಸ್ ವರಿಷ್ಠರಿಗೆ ಗೌರವ ನೀಡುವ ವ್ಯಕ್ತಿತ್ವ ಹೊಂದಿರುವವರು. ಅವರು ಬೇರೆಯವರಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಸರ್ಕಾರ ರಾಜ್ಯದ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಗಮನಹರಿಸುತ್ತಿಲ್ಲ: ನಿಖಿಲ್
ನನಗೆ ಈ ವಿಚಾರ ಗೊತ್ತಿಲ್ಲ. ಪ್ರತಿಯೊಬ್ಬರಿಗೂ ಒಬ್ಬೊಬ್ಬರು ಸಿಎಂ ಆಗಲಿ ಎಂದು ಆಸೆ ಪಡುತ್ತಾರೆ. ಪ್ರತಿ ಜಿಲ್ಲೆ, ಸಮುದಾಯದವರು ನಮ್ಮವರು ಸಿಎಂ ಆಗಲಿ ಎಂದು ಆಶಯ ವ್ಯಕ್ತಪಡಿಸುವುದು ಸಹಜ. ಇದು ಇಂದು ನಡೆದಿರುವ ವಿಚಾರವಲ್ಲ. ಪ್ರತಿ ಅವಧಿಯಲ್ಲೂ ಇಂತಹ ಬೆಳವಣಿಗೆ ನಡೆದುಕೊಂಡು ಬಂದಿದೆ. ಇಂತಹ ಅಭಿಪ್ರಾಯವನ್ನು ತಪ್ಪು ಎಂದು ಹೇಳಲು ಆಗುವುದಿಲ್ಲ ಎಂದರು.
ನನಗೆ ಕಾರಣ ಗೊತ್ತಿಲ್ಲ. ಆದರೆ ನನಗೆ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಮತ್ತೆ ವಿಚಾರಣೆಗೆ ಕರೆದಾಗ ಬರಬೇಕು ಎಂದು ತಿಳಿಸಿದ್ದಾರೆ. ಜವಾಬ್ದಾರಿಯುತ ಪ್ರಜೆಯಾಗಿ ವಿಚಾರಣೆಗೆ ಸಹಕಾರ ನೀಡಲು ಸಿದ್ಧನಿದ್ದೇನೆ ಎಂದು ತಿಳಿಸಿದರು.
