ಚಿಕ್ಕಬಳ್ಳಾಪುರ: ತಾಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯವು ಮೌಲ್ಯಾಧಾರಿತ, ಸಮಗ್ರ ಶಿಕ್ಷಣದ ತತ್ವದ ಮೇಲೆ ಸ್ಥಾಪಿತವಾದ ಸ್ವತಂತ್ರ ವಿಶ್ವವಿದ್ಯಾಲಯವಾಗಿದೆ. ಶಿಕ್ಷಣವನ್ನು ವಾಣಿಜ್ಯ ಹಿತಾಸಕ್ತಿಗಳಿಂದ ಬೇರ್ಪಡಿಸಿ ಆಧ್ಯಾತ್ಮಿಕತೆ ಮತ್ತು ಸೇವೆಯೊಂದಿಗೆ ಮರುಸಂಪರ್ಕಿಸುವ ಮೂಲಕ ಶಿಕ್ಷಣದ ಉದ್ದೇಶವನ್ನು ಮರು ವ್ಯಾಖ್ಯಾನಿಸುತ್ತಾ ಜಾಗತಿಕ ಮನ್ನಣೆಯನ್ನು ಗಳಿಸಿದೆ. ಅದರ ಸಂಸ್ಥಾಪಕ ಮತ್ತು ಕುಲಾಧಿಪತಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ವಿಶ್ವವಿದ್ಯಾಲಯವು ಶಿಕ್ಷಣವನ್ನು ಅದರ ನಿಜವಾದ ಸ್ವರೂಪಕ್ಕೆ ಪುನಃಸ್ಥಾಪಿಸಲು ಬದ್ಧವಾಗಿದೆ.
ಈ ಧ್ಯೇಯವನ್ನು ಅನುಸರಿಸುವ ಸಲುವಾಗಿ, ಸದರಿ ವಿಶ್ವವಿದ್ಯಾಲಯವು ಫೆಬ್ರವರಿ 24, 2025 ರಂದು 50 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಉಪಕುಲಪತಿಗಳ ಭಾಗವಹಿಸುವಿಕೆಯೊಂದಿಗೆ “ಭಾರತೀಯ ನೆಲೆಯಲ್ಲಿ ಮೌಲ್ಯಾಧಾರಿತ ಶಿಕ್ಷಣ” ಎಂಬ ವಿಷಯದ ಕುರಿತು ಮೊದಲ ಅಖಿಲ ಭಾರತ ಕುಲಪತಿಗಳ ಸಮ್ಮೇಳನವನ್ನು ಆಯೋಜಿಸಿತ್ತು. ಇದರ ಯಶಸ್ಸು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ 2020 ರಿಂದ ಪ್ರೇರಿತವಾಗಿ, 2ನೇ ಆವೃತ್ತಿಯ – “ಉತ್ತಮ ಜಗತ್ತಿಗಾಗಿ ಮಾನವೀಯ ಮೌಲ್ಯ ಶಿಕ್ಷಣ” – ಮಾನವೀಯ ಮೌಲ್ಯಗಳು ಮತ್ತು ನೈತಿಕ ಪ್ರಜ್ಞೆಯನ್ನು ಮುಖ್ಯವಾಹಿನಿಯ ಶಿಕ್ಷಣದಲ್ಲಿ ಸಂಯೋಜಿಸುವ ಮೂಲಕ ಆಶಯವನ್ನು ಸದೃಢಗೊಳಿಸುವ ಸಂವಾದ ಆಧಾರಿತ ಸಮಾವೇಶವನ್ನು ಈ ತಿಂಗಳ ದಿನಾಂಕ 8 ಮತ್ತು 9ರಂದು ಸತ್ಯಸಾಯಿ ಗ್ರಾಮದ ಶ್ರೀ ಸತ್ಯಸಾಯಿ ಪ್ರೇಮಾಮೃತಮ್ ಸಭಾಂಗಣದಲ್ಲಿ ಆಯೋಜಿಸಿದೆ.
ಈ ಸಮ್ಮೇಳನವು ಕುಲಾಧಿಪತಿಗಳು, ಉಪಕುಲಪತಿಗಳು ಮತ್ತು ಶೈಕ್ಷಣಿಕ ನೇತಾರರಲ್ಲಿ ಮಾನವೀಯ ಶಿಕ್ಷಣವನ್ನು ಅನುಷ್ಠಾನಿಕ ಮೌಲ್ಯವಾಗಿ ಅಳವಡಿಸಿ ಕಾರ್ಯನಿರ್ವಹಿಸುವ ವೇದಿಕೆಯನ್ನು ಸ್ಥಾಪಿಸುವ ಕಾರ್ಯಸೂಚಿಯನ್ನು ಹೊಂದಿರುತ್ತದೆ. ವ್ಯಕ್ತಿತ್ವ, ಆತ್ಮಸಾಕ್ಷಿ ಮತ್ತು ಸಮುದಾಯವನ್ನು ಪೋಷಿಸುವ ಅಂತರ್ಗತವಾಗಿರುವ ಸಾಮಾಜಿಕ ಜವಾಬ್ದಾರಿಯುಳ್ಳ ವಿಶ್ವವಿದ್ಯಾಲಯಗಳ ರಚನೆಗೆ ಸ್ಫೂರ್ತಿ ನೀಡಲು ಪ್ರಯತ್ನಿಸುತ್ತದೆ. ಉನ್ನತ ನಾಯಕತ್ವವನ್ನು ರೂಢಿಸಿ ಆ ಮೂಲಕ ಮೌಲ್ಯಗಳನ್ನು ಸಂಸ್ಥೆಗಳ ಮುಖಾಂತರ ದೇಶದಾದ್ಯಂತ ಹರಡುವ ಮಾಡುವ ಗುರಿಯನ್ನು ಹೊಂದಿದೆ. ಭವಿಷ್ಯಕ್ಕೆ ಸಿದ್ಧವಾದ ಮತ್ತು ನೈತಿಕವಾಗಿ ನೆಲೆಗೊಂಡ ಉನ್ನತ ಶಿಕ್ಷಣದ ಭೂದೃಶ್ಯವನ್ನು ಈ ಸಮಾವೇಶವು ರೂಪಿಸಲಿದೆ. ಇದನ್ನೂ ಓದಿ: ಕೆಎಸ್ಆರ್ ಟಿಸಿಯಲ್ಲಿ ಅನುಕಂಪದ ನೇಮಕಾತಿ ಆದೇಶ ವಿತರಣೆ
21 ನೇ ಶತಮಾನದಲ್ಲಿ ಮಾನವೀಯತೆಯ ಪರಿಕಲ್ಪನೆ ಮತ್ತು ಅದರ ಪ್ರಸ್ತುತತೆಯನ್ನು ಸ್ಪಷ್ಟಪಡಿಸುವುದು. ಶಿಕ್ಷಣ ವ್ಯವಸ್ಥೆಗಳು ಶೈಕ್ಷಣಿಕ ಶ್ರೇಷ್ಠತೆಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಸಕ್ರಿಯವಾಗಿ ಬೆಳೆಸಬಹುದಾದ ನೆಲೆಯನ್ನು ಅನ್ವೇಷಿಸುವ ಕಾರ್ಯವು ಸಮಾವೇಶದಲ್ಲಿ ಅನಾವರಣಗೊಳ್ಳಲಿದೆ.
ವಿಶ್ವವಿದ್ಯಾಲಯದ ಪಠ್ಯಕ್ರಮ, ಶಿಕ್ಷಣಶಾಸ್ತ್ರ ಮತ್ತು ವಿದ್ಯಾನಿವೇಶನ ಸಂಸ್ಕೃತಿಯಲ್ಲಿ ಮಾನವೀಯ ಶಿಕ್ಷಣವನ್ನು ಸಂಯೋಜಿಸಲು ಕಾರ್ಯಸಾಧ್ಯವಾಗುವ ಚೌಕಟ್ಟು ಮತ್ತು ತಂತ್ರಗಳನ್ನು ಸಮಾವೇಶವು ನೀಡಲಿದೆ.
ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳ ಬೆಳವಣಿಗೆ ಮತ್ತು ಪ್ರಭಾವವನ್ನು ಪತ್ತೆಹಚ್ಚಲು ಮೌಲ್ಯಮಾಪನ ಸಾಧನಗಳನ್ನು ಪರಿಚಯಿಸುವ ಸಾಧನೆಯು ಈ ಸಮಾರಂಭದಲ್ಲಿ ಬೆಳಕು ಕಾಣಲಿದೆ.
ಶಿಕ್ಷಣದ ಮೂಲಕ ಸಾಮಾಜಿಕ ಪರಿವರ್ತನೆಯ ಮೌಲ್ಯದ ಕಡೆಗೆ ಕುಲಪತಿಗಳಲ್ಲಿ ವಿನಿಮಯದ ದೃಷ್ಟಿಕೋನ ಮತ್ತು ಬದ್ಧತೆಯನ್ನು ಬೆಳೆಸುವ ಧ್ಯೇಯವನ್ನು ಸಮಾವೇಶವು ಹೊಂದಿದೆ.
ಈ ಸಮ್ಮೇಳನವು ದೇಶದ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು, ಹಿರಿಯ ಆಡಳಿತಗಾರರು, ಶಿಕ್ಷಣ ನೀತಿ ನಿರೂಪಕರು ಮತ್ತು ಮನೋವಿಜ್ಞಾನ, ನೀತಿಶಾಸ್ತ್ರ, ಆಧ್ಯಾತ್ಮಿಕತೆ ಮತ್ತು ಶಿಕ್ಷಣಶಾಸ್ತ್ರದ ಪ್ರಮುಖ ತಜ್ಞರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಲಿದೆ.
ಸಮ್ಮೇಳನವು ಮುಖ್ಯ ಅಧಿವೇಶನಗಳು, ಸಂವಾದಾತ್ಮಕ ಸಂವಾದಗಳು ಮತ್ತು ಸದ್ಗುರು ಶ್ರೀ ಮಧುಸೂದನ ಸಾಯಿ ಅವರೊಂದಿಗೆ ಅಭಿಮುಖ ಸಂವಾದ ನಡೆಸುವ ಯೋಜನೆಯನ್ನು ಹಾಕಿಕೊಂಡಿದೆ.
2025 ರ ಜುಲೈ 8ರಂದು ಬೆಳಿಗ್ಗೆ 9 ಗಂಟೆಗೆ ಉದ್ಘಾಟನೆಗೊಂಡು ದಿನಾಂಕ 9 ರವರೆಗೆ ಮುಂದುವರಿಯುವ ಸಮಾವೇಶವು ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಘಟಿಕೋತ್ಸವ ಜುಲೈ 10 ರ ಪೂರ್ವದಲ್ಲಿ ನಡೆಯುವುದರಿಂದ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದ್ದು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಸುಧಾರಣೆಯನ್ನು ತರುವ ಆಶಾಭಾವನೆಯನ್ನು ಹುಟ್ಟು ಹಾಕಿದೆ.
