ಬೆಂಗಳೂರು: ಬೊಮ್ಮನಹಳ್ಳಿ ಹಾಗೂ ಸಿಲ್ಕ್ ಬೋರ್ಡ್ ಸುತ್ತಮುತ್ತಲು ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಹಲವಾರು ವರ್ಷಗಳು ಕಳೆದರೂ ಕೂಡ ಇನ್ನೂ ಸಾರ್ವಜನಿಕರಿಗೆ ಸೇವೆಗೆ ಮುಕ್ತವಾಗಿಲ್ಲ. ಇದಕ್ಕೆ ಕಾರಣವೇನೆಂಬುದು ಇಲ್ಲಿಯವರೆಗೂ ತಿಳಿದಿಲ್ಲ ಹಾಗಾಗಿ ಆದಷ್ಟು ಬೇಗ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಸಾರ್ವಜನಿಕರಿಗೆ ಕಲ್ಪಿಸ ಕೊಡಬೇಕೆಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಆಗ್ರಹಿಸಿದರು.
ಸಂಸದ ತೇಜಸ್ವಿ ಸೂರ್ಯ ಮತ್ತು ಬೆಂಗಳೂರು ದಕ್ಷಿಣ ಶಾಸಕರೊಂದಿಗೆ ಬಿಎಂಆರ್ಸಿಎಲ್ ಎಂ.ಡಿ ಎಂ ಮಹೇಶ್ವರ್ ರಾವ್ ರವರಿಗೆ ಮನವಿ ಪತ್ರವನ್ನು ನೀಡಿದರು.
ನಂತರ ಮಾತನಾಡಿದ ಅವರು, ನಮ್ಮ ಮೆಟ್ರೊ ಹಳದಿ ಮಾರ್ಗ ಇನ್ನೂ ಸಾರ್ವಜನಿಕ ಸೇವೆಗೆ ಮುಕ್ತವಾಗಿಲ್ಲ. ಈ ವಿಳಂಬ ಕೊನೆಗಾಣಬೇಕಿದೆ. ಬಿಎಂಆರ್ಸಿಎಲ್ ಅನೇಕ ಗಡುವುಗಳನ್ನು ಮೀರಿದೆ. ಸಿಲ್ಕ್ ಬೋರ್ಡ್ ಉಸಿರುಗಟ್ಟುತ್ತಿದೆ. ಐಟಿ ಕಾರಿಡಾರ್ ನಿಧಾನವಾಗುತ್ತಿದೆ. ಬೆಂಗಳೂರಿಗರು ನರಳುತ್ತಿದ್ದಾರೆ ಎಂದರು.
ಅಲ್ಲದೆ ಏಕಾಏಕಿ ಮೆಟ್ರೋ ಟಿಕೆಟ್ ದರಗಳನ್ನು ಏರಿಸಿ, ಸಾರ್ವಜನಿಕರಿಗೆ ಬೆಲೆ ಏರಿಕೆಗೆ ದೂಡಿರುವ Bangalore Metro Rail Corporation Limited ಗೆ, ನಾವು ಕಳೆದ 3 ತಿಂಗಳುಗಳಿಂದ ದರ ಏರಿಕೆ ಸಮಿತಿಯ (Fare fixation report) ವರದಿ ನೀಡುವಂತೆ ಮನವಿ ಸಲ್ಲಿಸಿದರೂ ಇದುವರೆಗೂ ಸ್ಪಂದನೆ ನೀಡದಿರುವುದು ಪ್ರಯಾಣಿಕರಿಗೆ ಮಾಡುತ್ತಿರುವ ದ್ರೋಹ. ಇದನ್ನೂ ಓದಿ: ಅರಣ್ಯವನ್ನು ರಕ್ಷಿಸಲು ಸರ್ಕಾರದೊಂದಿಗೆ ಕೈಜೋಡಿಸಬೇಕು: ಮಲ್ಲಿಕಾರ್ಜುನ ಖರ್ಗೆ
ಅವೈಜ್ಞಾನಿಕ ರೀತಿಯಲ್ಲಿ ದರ ಏರಿಸಿ, ಸಾಮಾನ್ಯ ಜನರಿಗೆ ತೊಂದರೆ ನೀಡುವುದನ್ನು ತಪ್ಪಿಸಿ, ದರ ನಿಗದಿ ಸಮಿತಿಯ ವರದಿಯನ್ನು ಶೀಘ್ರವೇ ಸಲ್ಲಿಸುವಂತೆ ನಾನು Bangalore Metro Rail Corporation Limited ರಲ್ಲಿ ವಿನಂತಿಸುತ್ತೇನೆ ಎಂದರು.
