ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆ ನಡೆಯುತ್ತಿದ್ದು, ಈಗಾಗಲೇ ತಮ್ಮ ತಮ್ಮ ಮೂಲ ಜಾತಿಗಳನ್ನು ನೋಂದಾಯಿಸಿಕೊಳ್ಳಲು ತಿಳಿಸಲಾಗಿದೆ. ಮೂಲ ಜಾತಿಯನ್ನು ನೋಂದಾಯಿಸಿಕೊಳ್ಳಲು ಜೂನ್ 30 ಕೊನೆಯ ದಿನಾಂಕವಾಗಿದ್ದು ಅದರ ಒಳಗಡೆ ಎಲ್ಲಾ ಪರಿಶಿಷ್ಟ ಜಾತಿಯವರು ತಮ್ಮ ಮೂಲ ಜಾತಿಯನ್ನು ನೋಂದಾಯಿಸಿಕೊಳ್ಳಿ ಎಂದು ಸಚಿವ ಕೆಎಚ್ ಮುನಿಯಪ್ಪ ಅವರು ಮನವಿ ಮಾಡಿದ್ದಾರೆ.
ಯಲಹಂಕ ತಾಲ್ಲೂಕಿನ ಪ್ರಮುಖ ಬಡಾವಣೆ ಹಾಗೂ ಗ್ರಾಮಗಳಿಗೆ ಭೇಟಿ ನೀಡಿ ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆಯ ಕುರಿತು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಇಂದು (ಗುರುವಾರ ಜೂನ್ 26) ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಪತ್ರಕರ್ತರಾಗುವವರಿಗೆ ಮಾತಿಗೆ ಮೊದಲು ನೋಟ ಮುಖ್ಯ: ಕೆ.ವಿ.ಪಿ
ನ್ಯಾಯಮೂರ್ತಿ ನಾಗಮೋಹನದಾಸ್ ರವರ ಏಕಸದಸ್ಯ ಆಯೋಗದ ನಿರ್ದೇಶನ ದಂತೆ ಸರ್ಕಾರವು ನಿರ್ದಿಷ್ಟ ದತ್ತಾಂಶಗಳ ಸಂಗ್ರಹಣೆಗಾಗಿ ಪರಿಶಿಷ್ಟ ಜಾತಿಯ 101 ಜಾತಿಗಳ ಮೂಲಜಾತಿಗಳನ್ನು ಮೇ 6 ರಿಂದ ಸಮೀಕ್ಷೆ ನಡೆಸುತ್ತಿದ್ದು ಜೂನ್ 30ಕ್ಕೆ ಅಂತ್ಯ ಗೊಳ್ಳುತ್ತಿದ್ದು, ಸಚಿವರು ಇಂದು ಖುದ್ದಾಗಿ ಯಲಹಂಕ ತಾಲ್ಲೂಕಿನ ಅರಕೆರೆ ಬಡಾವಣೆ, ಸುರದೇನಪುರ, ಎಂ.ಎಸ್ ಪಾಲ್ಯ, ಬೆಟ್ಟಹಳ್ಳಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಮೂಲ ಜಾತಿಗಳನ್ನು ನಮೂದಿಸಲು ನಾಗರಿಕರಿಗೆ ಮನವಿ ಮಾಡಿದರು.
ಎಲ್ಲಾ ಪರಿಶಿಷ್ಟ ಜಾತಿಯ 101 ಸಮುದಾಯದವರು ತಪ್ಪದೇ ಮೂಲಜಾತಿಯನ್ನು ನಮೂದಿಸುವ ಮೂಲಕ ಅವಕಾಶಗಳಿಂದ ವಂಚಿತರಾಗದಿರಲು ಮನವಿ ಮಾಡಿದರು.
