ಮೈಸೂರು: ರಂಗಮಂದಿರದಿಂದ ತಮ್ಮ ನಟನೆಯ ಜೀವನವನ್ನು ಪ್ರಾರಂಭಿಸಿದ ನಟಿ ಉಮಾಶ್ರೀ ಅವರು ಈಗಲೂ ಕೂಡ ಹಲವಾರು ಸಿನಿಮಾ ಹಾಗೂ ಧಾರವಾಹಿಗಳ ಮೂಲಕ ನಟಿಸಿ ಅಭಿಮಾನಿಗಳನ್ನು ರಂಜಿಸುತ್ತಾರೆ.
ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸಿದರು ಕೂಡ ರಂಗಭೂಮಿಯಿಂದ ತಮ್ಮ ಜೀವನವನ್ನು ಕಟ್ಟಿಕೊಂಡಿರುವುದರಿಂದ ಈಗಲೂ ಕೂಡ ಅವರು ರಂಗಮಂದಿರದಲ್ಲಿ ನಟನೆಯನ್ನು ಮಾಡುತ್ತಾರೆ.
ಅದರಂತೆ (ಭಾನುವಾರ ಜೂನ್ 22) ಬೇಲೂರು ರಘುನಂದನ್ ವಿರಚಿತ, ಚಿದಂಬರ ರಾವ್ ಜಂಬೆ ನಿರ್ದೇಶಿಸಿರುವ “ಶರ್ಮಿಷ್ಠೆ” ನಾಟಕದಲ್ಲಿ ಹಿರಿಯ ನಟಿ ಉಮಾಶ್ರೀ ಅವರು ಮಂಡ್ಯ ರಮೇಶ್ ಅವರ ನಟನ ರಂಗಶಾಲೆಯಲ್ಲಿ ಅಭಿನಯಿಸಿದರು.
ಈ ನಾಟಕವನ್ನು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ವೀಕ್ಷಿಸಿದರು.
ಈ ವೇಳೆ ಮಾತನಾಡಿದ ಅವರು, ಬಹುಮುಖ ಪ್ರತಿಭೆ ಉಮಾಶ್ರೀ ಅವರು ಭಾವಪೂರ್ಣವಾದ ಅಭಿನಯ ನಮ್ಮೆನ್ನೆಲ್ಲ ಒಂದು ಗಂಟೆ ಕಾಲ ಭಾವಪರವಶಗೊಳಿಸಿದೆ. ಇಬ್ಬರು ಪರಮಾಪ್ತ ಸ್ನೇಹಿತರ ವಿಭಿನ್ನವಾದ ನಡೆ, ನುಡಿಗಳು ಹಾಗೂ ಸಂಘರ್ಷದ ಸನ್ನಿವೇಶಗಳ ಮನೋಜ್ಞವಾದ ನಟನೆ ನಿಜಕ್ಕೂ ಪ್ರಶಂಸನೀಯ ಎಂದರು.
ಕಷ್ಟದ ದಿನಗಳಿಂದ ಬೆಳೆದು ಬಂದಿರುವ ಉಮಾಶ್ರೀ ಅವರು ಜೀವನದ ಅನೇಕ ಮಜಲುಗಳನ್ನು ಹತ್ತಿರದಿಂದ ಕಂಡಿದ್ದಾರೆ. ನಾಟಕದಲ್ಲೂ ಕೂಡ ಎಲ್ಲಿಯೂ ಏರಿಳಿತಗಳಿಲ್ಲದೆ ಅತ್ಯುತ್ತಮವಾಗಿ ಏಕಪಾತ್ರದಲ್ಲಿ ಅಭಿನಯಿಸಿ ಪಾತ್ರಕ್ಕೆ ಜೀವತುಂಬಿದ್ದಾರೆ. ಅವರ ಅಪ್ರತಿಮಾ ಕಲಾಪ್ರತಿಭೆಯನ್ನು ಈ ನಾಟಕದ ಮೂಲಕ ಅಭಿವ್ಯಕ್ತಿಗೊಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜಕೀಯದಲ್ಲಿಯೂ ಕೂಡ ಮಹಿಳಾ ಮತ್ತು ಮಕ್ಕಳ ಸಚಿವೆಯಾಗಿ ಮಹಿಳಾ ಪರವಾಗಿ ಉತ್ತಮವಾದ ಕೆಲಸಗಳನ್ನು ಮಾಡಿದ್ದಾರೆ. ಮಕ್ಕಳು ಹಾಗೂ ಬಾಣಂತಿಯರ ಬಗ್ಗೆ ಆಸಕ್ತಿವಹಿಸಿ ಅನೇಕ ಕೊಡುಗೆ ನೀಡಿದ್ದಾರೆ. ವಿಧಾನ ಪರಿಷತ್‌ನಲ್ಲಿ ಕೂಡ ಚಳುವಳಿಯ ಮೂಲಕ ತಮ್ಮ ಜವಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ದೇವರಿಗೆ ಮುಷ್ಟಿ ಕಾಣಿಕೆ ಅರ್ಪಿಸಿದ ರಕ್ಷಿತ್ ಶೆಟ್ಟಿ
ರಂಗಕ್ಷೇತ್ರಗಳು ಸಾಮಾಜಿಕ ಜವಾಬ್ದಾರಿ ಮತ್ತು ಸಂದೇಶಗಳನ್ನು ಸಾರುವ ಮೂಲಕ ಮಹತ್ತರವಾದ ಬದಲಾವಣೆಯನ್ನು ಜಾರಿಮಾಡುವಂತಹ ವೇದಿಕೆಗಳಾಗಿವೆ. ಇಂತಹ ಕೆಲಸಗಳಿಗೆ ಪ್ರೇರಕ ಶಕ್ತಿಯಾಗಿ ಉಮಾಶ್ರೀ ಹಾಗೂ ಮಂಡ್ಯ ರಮೇಶ್ ಅವರಂತಹ ಕಲಾವಿದರ ಕೊಡುಗೆ ಶ್ಲಾಘನೀಯ ಎಂದು ಹೇಳಿದರು.
