ಬೆಂಗಳೂರು: ಆಂಧ್ರಪ್ರದೇಶದಲ್ಲಿ ಕರ್ನಾಟಕದ ತೋತಾಪುರಿ ಮಾವಿನಹಣ್ಣಿಗೆ ನಿರ್ಬಂಧ ವಿಧಿಸಿರುವುದರಿಂದ ಕರ್ನಾಟಕ ರಾಜ್ಯದಲ್ಲಿ ರೈತರು ಸಂಕಷ್ಟ ಪಡುವ ಪರಿಸ್ಥಿತಿ ಬಂದಿದೆ.
ರಾಶಿಗಟ್ಟಲೆ ಮಾವಿನ ಹಣ್ಣನ್ನು ರಸ್ತೆಗೆ ಹಾಕಿ ರೈತರು ಅಕ್ರೋಶ ಹೊರಹಾಕುತ್ತಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದ್ದು ರೈತರು ಕಣ್ಣೀರು ಹಾಕುವಂತಹ ಪರಸ್ಥಿತಿ ಬಂದೊದಗಿದೆ
ಹೌದು, ಕರ್ನಾಟಕದ ತೋತಾಪುರಿ ಮಾವಿನ ಹಣ್ಣಿಗೆ ಆಂಧ್ರಪ್ರದೇಶ ಚಿತ್ತೂರು ಜಿಲ್ಲಾಧಿಕಾರಿ ನಿರ್ಬಂಧ ಹೇರಿರುವುದರಿಂದ ಕರ್ನಾಟಕದ ಅದೆಷ್ಟೋ ರೈತರು ಮಾವಿನ ಹಣ್ಣನ್ನು ಬೀದಿಗೆ ಹಾಕುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು ಕಣ್ಣೀರು ಹಾಕುತ್ತಿದ್ದಾರೆ.
ಇನ್ನು ಆಂದ್ರದಲ್ಲಿ ಕರ್ನಾಟಕದ ತೋತಾಪುರಿ ಮಾವಿನ ಹಣ್ಣನ್ನು ನಿಷೇಧ ಮಾಡಿರುವುದರಿಂದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.
ಚಿತ್ತೂರು ಜಿಲ್ಲಾಧಿಕಾರಿ ಕರ್ನಾಟಕದ ತೋತಾಪುರಿ ಮಾವು ನಿರ್ಬಂಧ ಹೇರಿದ್ದಾರೆ. ಇದರಿಂದ ಕರ್ನಾಟಕ ಗಡಿಭಾಗದ ಮಾವು ಬೆಳೆದ ರೈತರಿಗೆ ತೊಂದರೆ ಉಂಟು ಮಾಡಿದೆ. ಹೀಗಾಗಿ ಈ ನಿರ್ಬಂಧವನ್ನ ತೆರವುಗೊಳಿಸಿ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಗೆ ಪತ್ರ ಕೋರಿದ್ದಾರೆ. ಇದನ್ನೂ ಓದಿ:ಚಡಚಣ ಏತ ನಿರಾವರಿ ಯೋಜನೆ ಅವ್ಯವಹಾರ
ಕಳೆದ ಜೂನ್ 7ರಂದು ಚಿತ್ತೂರು ಡಿಸಿ ಅನ್ಯರಾಜ್ಯಗಳ ತೋತಾಪುರಿ ಮಾವು ನಿಷೇಧ ಮಾಡಿದ್ದಾರೆ. ಕರ್ನಾಟಕದ ಗಡಿಯಲ್ಲಿ ಹೆಚ್ಚು ತೋತಾಪುರಿ ಬೆಳೆಯಲಾಗುತ್ತಿದೆ. ಈ ಭಾಗದ ರೈತರಿಗೆ ಚಿತ್ತೂರು ಮಾರುಕಟ್ಟೆ ಮುಖ್ಯ ಪ್ರದೇಶ. ಡಿಸಿ ಅವರ ಈ ನಿರ್ಧಾರ ನೆರೆ ರಾಜ್ಯಗಳ ರೈತರಿಗೆ ಬೆದರಿಕೆಯೊಡ್ಡುವ ರೀತಿ ಇದೆ. ರೈತರಿಗೆ ಆರ್ಥಿಕ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ಕರ್ನಾಟಕ ರಾಜ್ಯದ ತೋತಾಪುರಿ ಮಾವಿನ ಹಣ್ಣನ್ನು ಆಂಧ್ರಪ್ರದೇಶದಲ್ಲಿ ಮಾರಾಟ ಮಾಡಲು ಅನುವು ಮಾಡಿಕೊಡಬೇಕೆಂದು ಸಿಎಂ ಸಿದ್ದರಾಮಯ್ಯ ಪತ್ರದ ಮೂಲಕ ನೇರವಾಗಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಮನವಿ ಮಾಡಿದ್ದಾರೆ.
