ಶಹಾಪುರ: ಆಡಂಬರ ಮದುವೆಗಾಗಿ ಸಾಲ ಮಾಡಿ, ಬಡ ಮತ್ತು ಮಾಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಬಾರದು ಎಂಬ ಸದುದ್ದೇಶದಿಂದ 2013 ರಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಆರಂಭಿಸಿದ್ದು, ಸರ್ಕಾರದ ಯೋಜನೆಯಲ್ಲಿ ಸರಳವಾಗಿ ಮದುವೆ ಆಗುವ ಮೂಲಕ ಎಲ್ಲರಿಗೂ ಮಾದರಿ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ಭೀಮರಾಯನಗುಡಿಯ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೋ.ಬಿ ಕೃಷ್ಣಪ್ಪ ಸ್ಥಾಪಿತ ಸಂಘಟನೆ ವತಿಯಿಂದ ಬುದ್ಧ, ಬಸವ , ಅಂಬೇಡ್ಕರ್ ಅವರ ಜಯಂತಿಯ ಅಂಗವಾಗಿ ಇಂದು (ಸೋಮವಾರ ಮೇ 26) ರಂದು ಹಮ್ಮಿಕೊಂಡಿದ್ದ ಉಚಿತ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನರ ಆರ್ಥಿಕ ಹೊರೆ ಕಡಿಮೆ ಮಾಡಲು ಸಾಮೂಹಿಕ ವಿವಾಹಗಳಂತಹ ಕಾರ್ಯಕ್ರಮಗಳು ಪೂರಕ.
ಮದುವೆ ಪ್ರತಿಯೊಬ್ಬರ ಜೀವನದ ಮಹತ್ತರ ಘಟ್ಟ. ಇದಕ್ಕಾಗಿ ಅನಗತ್ಯ ಹಣ ವ್ಯರ್ಥ ಮಾಡುವ ಅಗತ್ಯವಿಲ್ಲಾ. ಸರ್ಕಾರವು ಇದಕ್ಕೆಂದೆ ಪ್ರೋತ್ಸಾಹಧನ ನೀಡುತ್ತಿದ್ದು ಇದರ ಲಾಭ ಪಡೆದುಕೊಳ್ಳಿ ಎಂದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸುಮಾರು ವರ್ಷಗಳಿಂದ ಸಾಮೂಹಿಕ ವಿವಾಹ ಸಮಾರಂಭಗಳನ್ನು ಮಾಡಿಕೊಂಡು ಬರುತ್ತಿರುವ ಕಾರ್ಯ ಶ್ಲಾಘನೀಯವಾದದ್ದು ಎಂದರು.
ಆಧುನಿಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವವಿದ್ದು, ಎಷ್ಟೇ ಕಷ್ಟಗಳಿದ್ದರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣಕೊಡಿಸಿ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ. ಸಾಮೂಹಿಕ ವಿವಾಹದಂತಹ ಕಾರ್ಯಕ್ರಮಗಳಿಂದಾಗಿ ಬಡವರಿಗೆ ಅನುಕೂಲವಾಗಲಿದೆ. ಇಂತಹ ಕಾರ್ಯಕ್ರಮಗಳು ಸಮಾಜಮುಖಿಯಾಗಿದ್ದು, ದುಂದುವೆಚ್ಚ, ಆಡಂಬರಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎಂದರು. ಗಣ್ಯರು, ಪೂಜ್ಯರು ಮಂಗಳಸೂತ್ರ ನೀಡಿ, ನೂತನ ವಧು-ವರರಿಗೆ ಶುಭ ಹಾರೈಸಿದರು. ಇದನ್ನೂ ಓದಿ: ಸಹನಾ ಕೌಶಿಕ್ ರವರ ನೃತ್ಯ ಪ್ರದರ್ಶನಕ್ಕೆ ಮನಸೋಲದವರಿಲ್ಲ!
ಈ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ , ಹಿರಿಯ ವಕೀಲರಾದ ಆರ್.ಚನ್ನಬಸ್ಸು ವನದುರ್ಗ, ಭೀಮಣ್ಣ ಮೇಟಿ, ಶಿವುಮಾಹಂತಪ್ಪ ಸಾಹು, ತಿಮ್ಮಯ್ಯ ಪುರ್ಲೆ, ಮಲ್ಲಿಕಾರ್ಜುನ ಪೂಜಾರಿ, ಮಲ್ಲಪ್ಪ ಉಳ್ಳಂಡಗೇರ, ಎಸ್.ಸಿ, ಎಸ್‌ಟಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶ್ರೀಶೈಲ್ ಹೊಸ್ಮನಿ, ವಿಭಾಗೀಯ ಅಧ್ಯಕ್ಷ ಸುಭಾಷ್ ತಳವಾರ, ಸಿದ್ದಣ್ಣ ತಣಕೇದಾರ, ಶಿವುಕುಮಾರ ತಳವಾರ, ಭೀಮರಾಯ ತಳವಾರ, ನಾಗಣ್ಣ ಬಡಿಗೇರ ,ಮಾಳಪ್ಪ ಸಲದಪುರ, ಚಂದ್ರಶೇಖರ ಗುತ್ತೇದಾರ, ಲಕ್ಷö್ಮಣ ಗೋಗಿ, ಶರಣಗೌಡ ಪಾಟೀಲ್, ಮಲ್ಲಿಕಾರ್ಜುನ ಪಾಟೀಲ್, ರಾಮು ಸಗರ, ಚಂದ್ರಶೇಖರ , ನಾಗಪ್ಪ ಸೇರಿದಂತೆ ಇತರರಿದ್ದರು.
