ಮೈಸೂರು: ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಮೂಲಕ ಜಿಲ್ಲೆಯ ಇತಿಹಾಸವನ್ನು ತಿರುಚಲಾಗುತ್ತಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿಯವರು ಟೀಕೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅಲ್ಲಿನ ಜನರ ಜನಾಭಿಪ್ರಾಯವನ್ನು ಪಡೆದೇ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ಕುಮಾರಸ್ವಾಮಿಯವರು ರಾಮನಗರ ಜಿಲ್ಲೆ ಸೃಜಿಸುವಾಗ, ಅಲ್ಲಿನ ಇತಿಹಾಸದ ಬಗ್ಗೆ ಯೋಚಿಸಿರಲಿಲ್ಲವೇ ಎಂದು ಮರುಪ್ರಶ್ನಿಸಿದರು.
ಇ.ಡಿ ಹಾಗೂ ಐ.ಟಿ ದಾಳಿಗಳು ರಾಜಕೀಯ ಪ್ರೇರಿತವಾಗಬಾರದು
ಇಡಿ ಯವರು, ಐ.ಟಿ.ಯವರು ತನಿಖೆ ಮಾಡುವುದನ್ನೇ ಆಗಲಿ ಅಥವಾ ಕಪ್ಪು ಹಣ ವ್ಯವಹಾರವನ್ನು ಪತ್ತೆ ಹಚ್ಚುವುದನ್ನೇ ಆಗಲಿ ಆಕ್ಷೇಪಿಸುವುದಿಲ್ಲ. ಆದರೆ ಇ.ಡಿ ಮತ್ತು ಐ.ಟಿ ದಾಳಿಗಳು ರಾಜಕೀಯ ದುರುದ್ದೇಶದಿಂದ ನಡೆಯಕೂಡದು. ಪ್ರಸ್ತುತ ಗೃಹ ಸಚಿವ ಜಿ.ಪರಮೇಶ್ವರ ಅವರ ಶಿಕ್ಷಣ ಸಂಸ್ಥೇಯ ಮೇಲೆ ಇ.ಡಿ.ದಾಳಿ ರಾಜಕೀಯ ಪ್ರೇರಿತ. ಸುಪ್ರೀಂ ಕೋರ್ಟ್ ನವರು ಯಾವ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ರೀತಿ ಅವಲೋಕಿಸಿದ್ದಾರೆ ಎಂದು ತೀರ್ಪು ಪರಿಶೀಲಿಸಿದ ನಂತರವಷ್ಟೇ ತಿಳಿಯಲಿದೆ ಎಂದರು. ಇದನ್ನೂ ಓದಿ: ಜೀವನೋತ್ಸಾಹಕ್ಕೆ ಪ್ರಕೃತಿಗಿಂತ ದೊಡ್ಡ ಗುರು ಬೇಕಿಲ್ಲ: ಕೆ.ವಿ.ಪ್ರಭಾಕರ್
ಒಂದು ವರ್ಷದಿಂದ ಅಪರಾಧ ಪ್ರಕರಣಗಳು ಕಡಿಮೆಯಿದೆ
ಅಪರಾಧ ಪ್ರಕರಣಗಳ ವಿರುದ್ಧ ಕಠಿಣ ಕ್ರಮವಾಗುತ್ತದೆ. ಆದರೆ ಕಳೆದ 1 ವರ್ಷದಿಂದ ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಿದ್ದು, ಬಿಜೆಪಿ ಅವಧಿಗೆ ಹೋಲಿಸಿದರೆ ನಮ್ಮ ಸರ್ಕಾರದ ಅವಧಿಯಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಿದೆ. ಅಪರಾಧಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಸರ್ಕಾರ ಖಂಡಿತ ಪ್ರಯತ್ನಿಸುತ್ತದೆ ಎಂದರು.
