ಬೆಂಗಳೂರು: ನಗರದಲ್ಲಿರುವ ಪೌರಕಾರ್ಮಿಕರು ಇಷ್ಟು ದಿನ ಗುತ್ತಿಗೆ ಆದರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಅವರಿಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೌರಕಾರ್ಮಿಕರನ್ನು ಕಾಯಂ ಗೊಳಿಸಿ ನೇಮಕ ಪತ್ರ ವಿತರಣೆ ಮಾಡಿದ್ದಾರೆ.
ಬಿಬಿಎಂಪಿ ವತಿಯಿಂದ ಆಯೋಜಿಸಲಾಗಿದ್ದ ಪೌರ ಕಾರ್ಮಿಕರ ದಿನಾಚರಣೆ ಹಾಗೂ ಪೌರ ಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಇಂದು (ಗುರುವಾರ ಮೇ. 01) ರಂದು ಭಾಗವಹಿಸಿ ಪೌರ ಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಅವರು, ಪೌರಕಾರ್ಮಿಕರು ಪ್ರಸ್ತುತ ಖಾಯಂ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಸುಮಾರು 9000 ಸಂಖ್ಯೆಯಷ್ಟಿರಬಹುದಾದ ವಾಹನಚಾಲಕರು, ಸಹಾಯಕರು ಹಾಗೂ ಆಪರೇಟರ್ಸ್ ಗಳನ್ನೂ ಕೂಡ ಖಾಯಂ ಮಾಡಲಾಗುವುದು. ಶುಚಿತ್ವದ ಕಾಯಕದಲ್ಲಿ ತೊಡಗಿರುವವರನ್ನು ಖಾಯಂ ನೇಮಕಾತಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮದ್ಯವರ್ತಿಗಳ ಹಾವಳಿಯಿಂದ ಪೌರಕಾರ್ಮಿಕರು ಮುಕ್ತರಾಗಿದ್ದು, ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಪೌರಕಾರ್ಮಿಕರನ್ನು ಗುತ್ತಿಗೆದಾರರು ಶೋಷಣೆ ಮಾಡುತ್ತಿದ್ದು, ನ್ಯಾಯಯುತವಾದ ಸಂಬಳ ಕೊಡದೇ ಇದ್ದುದ್ದನ್ನು ಗಮನಿಸಿದ್ದೆ. ಅದಕ್ಕಾಗಿ ಶೋಷಣೆಗೊಳಗಾದ ಪೌರಕಾರ್ಮಿಕರ ಸಹಾಯಕ್ಕಾಗಿ ಕನಿಷ್ಟ ವೇತನ ಕಾಯ್ದೆ ಪ್ರಕಾರ ದೊರೆಯಬೇಕಾದ ಕನಿಷ್ಟ ಸಂಬಳವನ್ನು ಕಡ್ಡಾಯವಾಗಿ ದೊರೆಯುವ ವ್ಯವಸ್ಥೆಯನ್ನು ಮಾಡಿದೆ. ಮೊದಲು 7000 ರೂ. ದೊರೆಯುತ್ತಿದ್ದ ಸಂಬಳವನ್ನು 17000 ಕ್ಕೆ ಹೆಚ್ಚಿಸಿ, ನೇರವಾಗಿ ಬ್ಯಾಂಕ್ ಖಾತೆಗೆ ಪಾವತಿಯಾಗುವ ವ್ಯವಸ್ಥೆಯನ್ನು ಮಾಡಲಾಯಿತು. ಈ ರೀತಿ ಪೌರಕಾರ್ಮಿಕರಿಗೆ ಮದ್ಯವರ್ತಿಗಳ ಹಾವಳಿಯಿಂದ ಮುಕ್ತಗೊಳಿಸಲಾಯಿತು ಎಂದರು.
ಪೌರಕಾರ್ಮಿಕರ ಬೇಡಿಕೆ ಈಡೇರಿಸಿದ್ದು ಕಾಂಗ್ರೆಸ್ ಸರ್ಕಾರ
ವಿರೋಧ ಪಕ್ಷದ ನಾಯಕನಾಗಿದ್ದ ಸಂದರ್ಭದಲ್ಲಿ ಪೌರಕಾರ್ಮಿಕರ ಬಹುದಿನಗಳ ಬೇಡಿಕೆಯಾಗಿದ್ದ ಖಾಯಂ ನೇಮಕಾತಿಯನ್ನು ಬೆಂಬಲಿಸಿ, ಆಗಿನ ಸರ್ಕಾರ ಖಾಯಂ ನೇಮಕಾತಿ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಪೌರ ಕಾರ್ಮಿಕರ ಈ ಬೇಡಿಕೆಯನ್ನು ಪೂರೈಸುವುದಾಗಿ ನೀಡಲಾಗಿದ್ದ ಭರವಸೆಯನ್ನು ಇಂದು ಈಡೇರಿಸಲಾಗಿದೆ. ಇದರಿಂದ 4ನೇ ದರ್ಜೆಯ ಪೌರಕಾರ್ಮಿಕನ ವೇತನ, ಅವರ ಖಾತೆಗೆ ನೇರವಾಗಿ 39000 ರೂ.ಗಳು ಪಾವತಿಯಾಗಲಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು. ಇದನ್ನೂ ಓದಿ: ʼಕೈʼ ಸರ್ಕಾರ ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತಿದೆ: ಬಿವೈವಿ
ಕಾಯಕದಲ್ಲಿ ಮೇಲು-ಕೀಳು ಇಲ್ಲ
ಶುಚಿತ್ವದಲ್ಲಿ ದೈವತ್ವವನ್ನು ಕಾಣಬೇಕು ಎಂದು ಮಹಾತ್ಮಾಗಾಂಧೀಜಿಯವರು ನುಡಿದಿದ್ದರು. ಪರಿಸರದ ಸ್ವಚ್ಛತೆಯನ್ನು ಕಾಪಾಡುವುದು ಶ್ರೇಷ್ಠವಾದ ಕೆಲಸ. ಬಸವಣ್ಣನವರು ಕಾಯಕವೇ ಕೈಲಾಸ ಎಂದು ತಿಳಿಸಿದ್ದು, ಯಾವುದೇ ಕೆಲಸದಲ್ಲಿ ಮೇಲು ಕೀಳೆಂಬುದು ಇಲ್ಲ ಎಂದರು.
