ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗು ಜೋರಾಗಿಯೇ ಕೇಳುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದೆಹಲಿ ಪ್ರವಾಸವನ್ನು ಕೈಗೊಂಡಿದ್ದಾರೆ.
ಇನ್ನು ಸಿಎಂ, ಡಿಸಿಎಂ ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಬಂದ ಮೇಲೆ ಕೆಪಿಸಿಸಿ ಅಧ್ಯಕ್ಷರ ಸ್ಥಾನ ಬದಲಾವಣೆ ಕುರಿತು ಗೊತ್ತಾಗುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿಯವರು ಹೇಳಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಷಯವನ್ನು ಪಕ್ಷದ ವರಿಷ್ಠರು ಎಷ್ಟು ಗಂಭೀರವಾಗಿ ಪರಿಣಿಸಿದ್ದಾರೆ ಅಂತ ಗೊತ್ತಿಲ್ಲ, ಅವರು ಬದಲಾವಣೆ ಅಗತ್ಯ ಎಂದು ಭಾವಿಸಿದ್ದರೆ ಅದಕ್ಕಾಗಿ ಪ್ರಕ್ರಿಯ ಶುರುವಾಗುತ್ತದೆ, ಎಂದು ಸತೀಶ್ ಜಾರಕಿಹೊಳಿ ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ನ ಶಾಸಕ ರಾಜೀನಾಮೆ ನೀಡಬೇಕು: ಛಲವಾದಿ ನಾರಾಯಣಸ್ವಾಮಿ
ಇನ್ನು ಹನಿಟ್ರ್ಯಾಪ್ನಿಂದ ತಪ್ಪಿಸಿಕೊಳ್ಳಲು ನಮ್ಮ ಹುಷಾರಿನಲ್ಲಿ ನಾವಿರಬೇಕು. ಯಾರಾದರೂ ಹಾಯ್ ಎಂದರೆ ಪ್ರತಿಯಾಗಿ ಹಾಯ್ ಎನ್ನಬಾರದು, ಬಾಯ್ ಹೇಳಿ ಬೇರೆ ಕಡೆ ಓಡಿ ಹೋಗಬೇಕಷ್ಟೆ ಎಂದರು.
ಸಚಿವರಷ್ಟೆ ಅಲ್ಲ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು. ಸಚಿವ ಕೆ.ಎನ್.ರಾಜಣ್ಣ ಅವರು ಹೇಳಿಕೊಂಡಿರುವ ಪ್ರಕಾರ ಹಾಯ್ ಎಂದಾಗ ಬಾಯ್ ಹೇಳಿ ಹೋಗಿದ್ದಾರೆ. ಇಲ್ಲಿ ಯಾರಿಗೆ ಯಾರು ಮಿತ್ರರು, ಯಾರು ಶತ್ರುಗಳು ಎಂಬುದೇ ಗೊತ್ತಾಗುವುದಿಲ್ಲ. ಎಚ್ಚರಿಕೆಯಿಂದ ಇರಬೇಕಷ್ಟೆ ಎಂದರು.
