ಪ್ರಯಾಗ್ರಾಜ್: ಪ್ರಯಾಗ್ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಕೋಟ್ಯಾನುಗಟ್ಟಲೆ ಭಕ್ತಾದಿಗಳು ಬಂದು ಪುಣ್ಯಸ್ಥಾನ ಮಾಡಿ ತಮ್ಮ ಪಾಪವನ್ನು ಪರಿಹಾರ ಮಾಡಿಕೊಂಡು ಹೋಗುತ್ತಿದ್ದಾರೆ.
ಹೌದು, ಜನವರಿ 13 ರಿಂದ ಪ್ರಯಾಗ್ರಾಜ್ ನಲ್ಲಿ ಪ್ರಾರಂಭವಾದ ಮಹಾಕುಂಭ ಮೇಳದಲ್ಲಿ ದೇಶದ ವಿವಿಧ ಮೂಲೆಗಳಿಂದ ಭಕ್ತಾದಿಗಳು ಭಾಗಿಯಾಗಿ ಪುಣ್ಯ ಸ್ಥಾನ ಮಾಡುವ ಮೂಲಕ ತಮ್ಮ ಪಾಪವನ್ನು ಪರಿಹಾರ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಮಹಾಕುಂಭ ಮೇಳದಲ್ಲಿ ಸುಮಾರು 64 ಕೋಟಿ ಭಕ್ತರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ಥಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಈ ಮಹಾ ಕುಂಭಮೇಳಕ್ಕೆ ಶಿವರಾತ್ರಿ ಹಬ್ಬದಂದು ಸುಮಾರು ಒಂದು ಕೋಟಿ ಜನ ಭಾಗಿಯಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ. ಫೆಬ್ರುವರಿ 26ರಂದು ಮಹಾಶಿವರಾತ್ರಿ ಪ್ರಯುಕ್ತ ಪ್ರಯಾಗ್ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಕ್ತ ಸಾಗರವೇ ಹರಿದು ಬರಲಿದೆ.
ಇದಕ್ಕಾಗಿ ಸಕಲ ಸಿದ್ಧತೆಗಳು ನಡೆಯುತ್ತಿದ್ದು ಎಲ್ಲಾ ಭಕ್ತಾದಿಗಳಿಗೂ ಯಾವುದೇ ರೀತಿ ತೊಂದರೆಯಾಗದಂತೆ ರೈಲುಗಳು, ವಿಮಾನಗಳು ಮತ್ತು ರಸ್ತೆ ಮಾರ್ಗಗಳ ಮೂಲಕವಾಗಿ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ. ಇದನ್ನೂ ಓದಿ: ಮಿನಿ ತಾರಾಲಯಕ್ಕೆ 12.88, ವಸತಿ ಶಾಲೆಗಳಿಗೆ 44 ಕೋಟಿ ವೆಚ್ಚಕ್ಕೆ ಅಸ್ತು: ಎಂ ಬಿ ಪಾಟೀಲ
ಕುಂಭಮೇಳದ ಕೊನೆಯ ದಿನ ಮಹಾಶಿವರಾತ್ರಿಯೊಂದಿಗೆ ಹೊಂದಿಕೆಯಾಗುವುದರಿಂದ, ನಗರದ ಎಲ್ಲಾ ಶಿವ ದೇವಾಲಯಗಳಿಗೆ ಭಕ್ತರಿಗೆ ಭೇಟಿ ನೀಡಲು ಅವಕಾಶ ನೀಡಲಾಗುವುದು, ಅಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಈಗಾಗಲೇ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮಹಾ ಕುಂಭಮೇಳದ ಆರಂಭದಲ್ಲಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಕಾರ್ಯಕ್ರಮಕ್ಕೆ 45 ಕೋಟಿಗೂ ಹೆಚ್ಚು ಭಕ್ತರು ಆಗಮಿಸುತ್ತಾರೆ ಎಂದು ಅಂದಾಜಿಸಿದ್ದರು, ಫೆಬ್ರವರಿ 11 ರ ವೇಳೆಗೆ ಈ ಮೈಲಿಗಲ್ಲು ಸಾಧಿಸಲಾಯಿತು. ಮುಂದಿನ ಮೂರು ದಿನಗಳಲ್ಲಿ ಆ ಸಂಖ್ಯೆ 50 ಕೋಟಿ ದಾಟಿತು.
