ಮಂಡ್ಯ: ದುಡಿಮೆಗೆ ತಕ್ಕ ಸಂಬಳ ಇಲ್ಲದ ಸಮಾಜದಲ್ಲಿ ಗ್ಯಾರಂಟಿಗಳು ದುಡಿಯುವ ವರ್ಗಗಳ ಪಾಲಿನ ಪ್ರಾಣವಾಯು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.
ಪತ್ರಿಕಾ ಭವನದಲ್ಲಿ ಬಡವರ ಭಾಗ್ಯವಿಧಾತ ಸಿದ್ದರಾಮಯ್ಯ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕಾರ್ಪೋರೇಟ್ ಗಳಿಗೆ ಫ್ರೀಬಿ ಕೊಟ್ಟರೆ ಡೆವಲಪ್ಮೆಂಟು ಅಂತಲೂ, ಶ್ರಮಿಕರಿಗೆ ಕೊಟ್ಟರೆ ಆರ್ಥಿಕತೆಗೆ ನಷ್ಟವೆಂದು ಹೇಳುವವರಿಗೆ ಗ್ರಹಿಕೆ ಮತ್ತು ದೃಷ್ಟಿದೋಷ ಎಂದು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದು ಜಾರಿ ಮಾಡಿದ ಗ್ಯಾರಂಟಿಗಳು ಕನ್ನಡ ನೆಲದ ಬಡವರು ಮತ್ತು ಮಧ್ಯಮ ವರ್ಗಗಳ ಪಾಲಿನ ಪ್ರಾಣವಾಯು ಆಗಿವೆ. ಹಲವಾರು ಆರ್ಥಿಕ ಸಮೀಕ್ಷೆಗಳು ಈ ಮಾತನ್ನು ಖಚಿತ ಪಡಿಸಿವೆ ಎಂದರು. ಇದನ್ನೂ ಓದಿ: ನೀರಾವರಿ ಸಚಿವರುಗಳ ಸಭೆ
ಸಾಮಾಜಿಕ ನ್ಯಾಯದ ಬದ್ಧತೆ, ಅಂಬೇಡ್ಕರ್ ಆಶಯ, ಬಸವಣ್ಣನವರ ನ ಮಾರ್ಗ ಮತ್ತು ರಾಜಕೀಯ ಹಿತಾಸಕ್ತಿಗಳು ಸಿದ್ದರಾಮಯ್ಯ ಅವರ ಭಾಗ್ಯಗಳ ಹಿಂದೆ ಕೆಲಸ ಮಾಡಿವೆ ಎಂದು ಕೆವಿಪಿ ವಿಶ್ಲೇಷಣೆ ಮಾಡಿದರು.
ಗ್ಯಾರಂಟಿಗಳ ಮಹತ್ವ ಏನು ಎಂದು ಅರ್ಥವಾಗಬೇಕಾದರೆ, ಇವು ಜಾರಿಯಾದ ಸಂದರ್ಭವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ನೋಟ್ ಬ್ಯಾನ್ ಕಾರಣದಿಂದ ಗಾರ್ಮೆಂಟ್ಸ್ ಗಳು, ಸಣ್ಣ ಪುಟ್ಟ ಉದ್ಯಮಗಳೆಲ್ಲಾ ಉಸಿರಾಡಲಾಗದೆ ಬಂದ್ ಆಗಿದ್ದವು.
ಈ ಹೊಡೆತದಿಂದ ಚೇತರಿಸಿಕೊಳ್ಳುತ್ತಿದ್ದಂತೆ ಕೋವಿಡ್ ಬಂತು. ದುಡಿಯುವ ವರ್ಗಗಳನ್ನು ಇದು ಬಾಣಲಿಯಿಂದ ಬೆಂಕಿಗೆ ಬಿಸಾಡಿತು. ಹೀಗೆ ನಿರಂತರ ಐದು ವರ್ಷಗಳ ಕಾಲ ಬಡವರ ಆರ್ಥಿಕ ಸ್ಥಿತಿ ಉಸಿರುಗಟ್ಟಿದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಈ ಗ್ಯಾರಂಟಿಗಳನ್ನು ಜಾರಿ ಮಾಡಿದ್ದು ಬಡವರ ಪಾಲಿಗೆ ಪ್ರಾಣವಾಯು ಆಯ್ತು ಎಂದು ವಿವರಿಸಿದರು.
