ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕರಡಿಗೆ ನಾಗರೀಕರಿಂದ ಬರುವ ಸಲಹೆಗಳನ್ನು ಸೇರಿಸಿ ಅಂತಿಮಗೊಳಿಸಲಾಗುವುದೆಂದು ಕರ್ನಾಟಕ ವಿಧಾನ ಮಂಡಲ ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷರಾದ ರಿಜ್ವಾನ್ ಹರ್ಷದ್ ರವರು ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯ ಯಲಹಂಕದ ಹಾಗೂ ದಾಸರಹಳ್ಳಿ ವಲಯ ಸೇರಿದಂತೆ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಇಂದು (ಬುಧವಾರ ಫೆ.12) ರಂದು ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕುರಿತು ಸಾರ್ವಜನಿಕರಿಂದ ಸಲಹೆ ಮತ್ತು ಅಭಿಪ್ರಾಯ ಸ್ವೀಕರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದಲ್ಲಿರುವ ಅಂಶಗಳು ಅಂತಿಮವಾದುದಲ್ಲ, ಕರಡು ಮಾತ್ರವಾಗಿದೆ. ಅದಕ್ಕಾಗಿ ಸಾಕಷ್ಟು ಸಭೆಗಳನ್ನು ನಡೆಸಿ ಅಲವಾರು ಅಂಶಗಳನ್ನು ಕೂಲಂಕುಶವಾಗಿ ಚರ್ಚಿಸಲಾಗಿದೆ. ಅದಲ್ಲದೆ ನಾಗರೀಕರಿಂದಲೂ ಸಲಹೆ/ಅಭಿಪ್ರಾಯಗಳನ್ನು ಸಂಗ್ರಹಿಸಿ ಕಾನೂನಿನಡಿ ಬರುವ ಎಲ್ಲಾ ಅಂಶಗಳನ್ನು ವಿಧೇಯಕದಲ್ಲಿ ಅಳವಡಿಸಿಕೊಂಡು ಬಿಲ್ ಪಾಸ್ ಮಾಡಲಾಗುವುದೆಂದು ತಿಳಿಸಿದರು.
ಪ್ರಸ್ತುತ ಬೆಂಗಳೂರಿನ ಆಡಳಿತ ಯಾವ ರೀತಿ ನಡೆಯುತ್ತಿದೆ, ಈ ಆಡಳಿತದ ವಿನ್ಯಾಸ ಯಾವ ರೀತಿಯಿದೆ. ನಗರದ ನಿವಾಸಿಗಳಿಗೆ ಇರುವ ಆಡಳಿತದಿಂದ ಎಷ್ಟರ ಮಟ್ಟನಲ್ಲಿ ಸಹಾಯ ಆಗುತ್ತಿದೆ ಎಂಬುದರ ಬಗ್ಗೆ ನಾವೆಲ್ಲರೂ ಅವಲೋಕಿಸಬೇಕಿದೆ ಎಂದು ಹೇಳಿದರು.
ಬೃಹದಾಕಾರವಾಗಿ ಬೆಳೆಯುತ್ತಿರುವ ನಗರಕ್ಕೆ ಒಬ್ಬರೇ ಮಹಾಪೌರರು ಹಾಗೂ ಒಬ್ಬರೇ ಆಯುಕ್ತರಿಂದ ಕೆಲಸ ಮಾಡಲು ಸಾಧ್ಯವಿಲ್ಲ. ಸ್ಥಳೀತವಾಗಿಯೇ ನಗರ ಪಾಲಿಕೆಗಳನ್ನು ನಿರ್ಮಾಣ ಮಾಡಿದಲ್ಲಿ, ಸ್ಥಳೀಯವಾಗಿರುವ ಸಮಸ್ಯೆಗಳನ್ನು ಸ್ಥಳೀಯವಾಗಿಯೇ ಚರ್ಚಿಸಿ, ಕೂಡಲೆ ಇತ್ಯರ್ಥ ಪಡಿಸಿಕೊಳ್ಳಬಹುದಾಗಿರುತ್ತದೆ ಎಂದು ತಿಳಿಸಿದರು.
