ರಾಮನಗರ: ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿದಲ್ಲಿ ಅಪಘಾತಗಳು ಕಡಿಮೆಯಾಗುತ್ತದೆ ಎಂದು ಡಿವೈಎಸ್ಪಿ ದಿನಕರ್ ಶೆಟ್ಟಿ ಅವರು ತಿಳಿಸಿದರು.
ಅವರು (ಜ. 29ರ ಬುಧವಾರ) ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿ ಸಾರಿಗೆ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ 36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ-2025, ಸಡಕ್ ಸುರಕ್ಷಾ – ಜೀವನ್ ಸುರಕ್ಷಾ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾರಿಗೆ ಹಾಗೂ ಪೊಲೀಸ್ ಇಲಾಖೆಯಿಂದ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಮನವರಿಗೆ ಮಾಡುವ ಕೆಲಸ ಮಾಡಲಾಗಿರುತ್ತದೆ. ಅದಾಗ್ಯೂ ವಾಹನ ಚಾಲನೆಯಲ್ಲಿನ ನಿರ್ಲಕ್ಷ್ಯದಿಂದ ಅಪಘಾತಗಳು ಸಂಭವಿಸುತ್ತಿದೆ ಎಂದರು.
ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ರಸ್ತೆ ದಾಟುವಾಗ ಹಾಗೂ ವಾಹನ ಚಾಲನೆ ಮಾಡುವಾಗ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಹಾಗೂ ವಾಹನಗಳ ಚಾಲನೆಯಲ್ಲಿ ಮೊಬೈಲ್ ಪೋನ್ ಬಳಕೆ ಮಾಡಬಾರದು, ವಾಹನಗಳ ದಾಖಲಾತಿಗಳನ್ನು ಇಟ್ಟುಕೊಂಡಿರಬೇಕು ಹಾಗೂ ವಾಹನ ಚಾಲನೆ ಮಾಡುವಾಗ ಸುರಕ್ಷತೆಯಿಂದ ಚಾಲನೆ ಮಾಡುವಂತೆ ಕರೆ ನೀಡಿದರು.
ವಾಹನ ಚಾಲನೆಯ ನಿರ್ಲಕ್ಷ್ಯತೆಯಿಂದ ಆಗುವ ಅಪಘಾತಗಳಿಂದ ದೈಹಿಕವಾಗಿ ಹಾಗೂ ಮಾನಸಿಕ ತೊಂದರೆಗೆ ಒಳಗಾಗಬೇಕಾಗುತ್ತದೆ ಅಲ್ಲದೆ ನಿಮ್ಮ ಕುಟುಂಬವು ಸಹ ನೋವು ಅನುಭಿಸಬೇಕಾಗದ ಪರಿಸ್ಥಿತಿ ಬರುತ್ತದೆ ಎಂದರು.
