ಕುಡಿಯುವ ನೀರಿಲ್ಲ; ಗೋಳು ಕೇಳುವರಿಲ್ಲಾ

ಕುಡಿಯುವ ನೀರಿಲ್ಲ; ಗೋಳು ಕೇಳುವರಿಲ್ಲಾ

ಕಂಪ್ಲಿ: ತಾಲ್ಲೂಕಿನ ನೆಲ್ಲುಡಿ ಕೊಟ್ಟಾಲ್ ಗ್ರಾಮದ ೬ನೇ ವಾರ್ಡಿನಲ್ಲಿರುವ ಎರಡು ಬೋರ್‌ವೆಲ್‌ಗಳಿಗೆ ೩ಎಚ್‌ಪಿ ಮೋಟರ್ ಅಳವಡಿಸುವ ಜತೆಗೆ ವಿದ್ಯುತ್ ಪೂರೈಕೆಯೊಂದಿಗೆ ಸಮರ್ಪಕವಾಗಿ ನೀರು ಒದಗಿಸಬೇಕೆಂದು ಆಗ್ರಹಿಸಿ, ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ನೆಲ್ಲುಡಿ ಕೊಟ್ಟಾಲ್ ಗ್ರಾಮ ಘಟಕ ಹಾಗೂ ತಾಲ್ಲೂಕು ಘಟಕದ ಪದಾಧಿಕಾರಿಗಳು ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಛೇರಿಯಲ್ಲಿ ನರೇಗಾ ಸಹಾಯಕ ನಿರ್ದೇಶಕ ಬೀರಲಿಂಗ ಅವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು.

ನಂತರ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ನೆಲ್ಲುಡಿ ಕೊಟ್ಟಾಲ್ ಗ್ರಾಮ ಘಟಕ ಅಧ್ಯಕ್ಷ ಇ.ಧನಂಜಯ್ಯ ಮಾತನಾಡಿ, ನೆಲ್ಲುಡಿ ಕೊಟ್ಟಾಲ್ ಗ್ರಾಮದ ಆರನೇ ವಾರ್ಡಿನಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದು, ಬೇಸಿಗೆ ಕಾಲದಲ್ಲಿ ತುಂಬಾ ನೀರಿನ ಸಮಸ್ಯೆ ಉದ್ಭವಿಸುತ್ತದೆ.

ಸುಮಾರು 20 ವರ್ಷಗಳಿಂದ ಇಲ್ಲಿನ ಜನತೆಗೆ ನೀರಿನ ಸಮಸ್ಯೆ ತಲೆದೋರಿದ್ದು, ಇದುವರೆಗು ನೀರಿನ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಇಲ್ಲಿನ ವಾರ್ಡಿನಲ್ಲಿ 2 ಬೋರ್‌ವೆಲ್‌ಗಳಿದ್ದು, ಸುಮಾರು 1 ರಿಂದ 1.5 ಇಂಚು ನೀರಿನ ಸೆಲೆಯಿದೆ. ಸಮರ್ಪಕವಾಗಿ ನೀರು ಒದಗಿಸಬೇಕಾದರೆ, ಅಧಿಕಾರಿಗಳು ಬೋರ್‌ವೆಲ್‌ಗಳಿಗೆ 3 ಎಚ್‌ಪಿ ಮೋಟರ್ ಅಳವಡಿಸಿ, ವಿದ್ಯುತ್ ಪೂರೈಕೆ ಮಾಡಿದರೆ, ಸಮರ್ಪಕವಾಗಿ ನೀರು ಪೂರೈಸಬಹುದು. ಆದರೆ, ಅಧಿಕಾರಿಗಳಿಗೆ ಅನೇಕ ಬಾರಿ ಮನವಿಯೊಂದಿಗೆ ಒತ್ತಾಯಿಸಿದರೂ, ಅಧಿಕಾರಿಗಳು ಮಾತ್ರ ಮೌನವಹಿಸಿದ್ದಾರೆ ಎಂದು ಪತ್ರಿಕೆಗೆ ತಿಳಿಸಿದರು.

ಈ ಸಂದರ್ಭದಲ್ಲಿ ಕರಿಯಪ್ಪ ಗುಡಿಮನಿ, ವಸಂತರಾಜ್ ಕಹಳೆ, ಹನುಮಂತ, ಬಸಪ್ಪ, ಶ್ರೀಕಾಂತ್, ಡೆವಿಡ್, ಪ್ರಶಾಂತ್, ಶಿವಶಂಕರಪ್ಪ, ಶಾಂತಪ್ಪ ಪೂಜಾರಿ, ಆಂಜಿನೇಯ್ಯ, ರಾಜಶೇಖರ್, ಹೊನ್ನೂರಪ್ಪ ಸೇರಿದಂತೆ ಅನೇಕರಿದ್ದರು.

Related