ಬೆಂಗಳೂರು: ರಾಜ್ಯದಾದ್ಯಂತ ಇಂದು ಕೆಎಸ್ಆರ್ ಟಿ ಸಿ ಬಸ್ ಹಾಗೂ ಬಿಎಂಟಿಸಿ ಸೇರಿದಂತೆ 4 ವಿಭಾಗಗಳ ಸಾರಿಗೆ ನೌಕರರ ಮುಷ್ಕರ ನಡೆಯುತ್ತಿದ್ದು, ಸಾರ್ವಜನಿಕರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬಸ್ಸಿಲ್ಲದೆ ಗಂಟೆಗಟ್ಟಲೆ ಬಸ್ ನಿಲ್ದಾಣಗಳಲ್ಲಿ ಕಾಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಸಾರಿಗೆ ನೌಕರರು ಮುಷ್ಕರ ಮಾಡುತ್ತಿರುವ ವಿಚಾರವಾಗಿ ಸಾರಿಗೆ ಹಾಗೂ ಮುಜರಾಯಿ ಸಚಿವರಾಗಿರುವಂತ ರಾಮಲಿಂಗ ರೆಡ್ಡಿ ಅವರು ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿದ್ದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾವು ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವೆ. ನಿನ್ನೆ ಹೈಕೋರ್ಟ್ ಮುಷ್ಕರವನ್ನು ಒಂದು ದಿನ ಮುಂದಕ್ಕೆ ಹಾಕಿ ಎಂದು ನಿರ್ದೇಶನ ನೀಡಿತ್ತು. ಹೈಕೋರ್ಟ್ ನಿರ್ದೇಶನವನ್ನು ನೌಕರರು ಮತ್ತು ಅವರ ಮುಖಂಡರು ಗೌರವಿಸುತ್ತಾರೆ ಎಂದು ನಾವು ಅಂದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಬಸ್ಸುಗಳು ಓಡುತ್ತಿವೆ. ಆದರೆ ಕೆಲವು ಜಿಲ್ಲೆಗಳಲ್ಲಿ ಓಡಾಟ ಕಡಿಮೆಯಾಗಿದೆ.
ಇಂದು ಕೋರ್ಟ್ ನಲ್ಲಿ ಮತ್ತೆ ಕೇಸ್ ವಿಚಾರಣೆಯಾಗಿದೆ. ನಾಳೆಯಿಂದ ಪರ್ಯಾಯ ವ್ಯವಸ್ಥೆ 100% ಮಾಡುತ್ತೇವೆ. ಈಗಾಗಲೇ ಸೂಚನೆ ಕೊಟ್ಟಿದ್ದೇವೆ ಎಂದಿದ್ದಾರೆ.
