ನಿಲ್ಲದ ವರುಣಾರ್ಭಟಕ್ಕೆ; ಸುಸ್ತಾದ ಜನ!

ನಿಲ್ಲದ ವರುಣಾರ್ಭಟಕ್ಕೆ; ಸುಸ್ತಾದ ಜನ!

ಬಾಗಲಕೋಟೆ : ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಚಿತ್ತಾ ಮಳೆ ಎಡಬಿಡದೇ ಸುರಿಯುತ್ತಿದ್ದು ರೈತರು, ಸಾಕಪ್ಪಾ ಸಾಕು, ನಿಲ್ಲೋ ಮಳೆರಾಯ ಎಂದು ಕೇಳುವಂತಾಗಿದೆ.

ಕಳೆದ 24 ಗಂಟೆಯಲ್ಲಿ ಜಿಲ್ಲೆಯಾದ್ಯಂತ 10.6 ಎಂ.ಎಂ ಮಳೆ ಸುರಿದೆ. ಆದರೆ, ನಿರಂತರ ಜಿಟಿಜಿಟಿ ಮಳೆಯಿಂದ ರೈತರು ಬೆಳೆದ ಬೆಳೆಗಳು ಸಂಪೂರ್ಣ ನೀರಿನಲ್ಲಿ ನಿಂತಿವೆ. ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಹೊಲದಿಂದ ದಡಕ್ಕೆ ತರಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಮನೆಗೆ ನುಗ್ಗಿದ ನೀರು ನಿರಂತರ ಮಳೆಯಿಂದ ಜಿಲ್ಲೆಯ ಹುನಗುಂದ ಪಟ್ಟಣದ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಜಮಖಂಡಿ ತಾಲೂಕಿನ ಕುಲಹಳ್ಳಿಯಲ್ಲಿ ಮನೆ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರು ಪಾರಾಗಿದ್ದಾರೆ.

ಗ್ರಾಮದಲ್ಲಿ ಸುಮಾರು 10ಕ್ಕೂ ಹೆಚ್ಚು ಮನೆಗಳು ಸೇರಿದಂತೆ ಸಾವಳಗಿ ಹೋಬಳಿಯಾದ್ಯಂತ 24 ಮನೆಗಳು ಕುಸಿದಿವೆ. ಈ ಪೈಕಿ 2 ಮನೆಗಳು ಪೂರ್ಣ ಕುಸಿದಿದ್ದರೆ 22 ಭಾಗಶಃ ಕುಸಿದಿವೆ.

ಸಾವಳಗಿ ಗ್ರಾಮದ ಸಿದ್ದು ರಾಮಪ್ಪ ಗವಳಿ ಎಂಬವರ ಆಕಳು ಮೇಲೆ ಚಪ್ಪರ ಬಿದ್ದು ಆಕಳು ಮೃತಪಟ್ಟಿದೆ. ಕಾಜಿಬೀಳಗಿ ಗ್ರಾಮದ ಗಂಗವ್ವ ಹೊನವಾಡ ಎಂಬವರ ಮೇಲೆ ಗೋಡೆ ಕುಸಿದು ಬಿದ್ದು ಗಾಯಗೊಂಡಿದ್ದು ಜಮಖಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಉಪ ತಹಶೀಲ್ದಾರ್ ವೈ.ಎಚ್. ದ್ರಾಕ್ಷಿ ತಿಳಿಸಿದ್ದಾರೆ.

Related