ಕೊಳೆತ ಸ್ಥಿತಿಯಲ್ಲಿ ಹುಲಿಗಳ ಕಳೇಬರ ಪತ್ತೆ

ಕೊಳೆತ ಸ್ಥಿತಿಯಲ್ಲಿ ಹುಲಿಗಳ ಕಳೇಬರ ಪತ್ತೆ

ಚಾಮರಾಜನಗರ: ತಾಲೂಕಿನ ಕೊತ್ತಲವಾಡಿ ಗ್ರಾಮ ಸಮೀಪದ ಮೇಲೂರು ಕಲ್ಲು ಕ್ವಾರಿಯ ಸಂಇಪದ ಪಾಳುಬಿದ್ದ ಜಮೀನಿನಲ್ಲಿ ಕೊಳೆತ ಸ್ಥಿತಿಯಲ್ಲಿ ಹುಲಿ ಹಾಗೂ ಹುಲಿ ಮರಿಯ ಕಳೆಬರಗಳು ಪತ್ತೆಯಾಗಿದೆ. ಮೇಲ್ನೋಟಕ್ಕೆ ಹುಲಿ ಹಾಗೂ ಮರಿಯ ಕಳೇಬರ ಎಂಬುದು ಖಚಿತ ಪಡಿಸಲಾಗಿದೆ.

ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಚಾಮರಾಜನಗರ ಬಫರ್ ವಲಯ ವ್ಯಾಪ್ತಿಯಲ್ಲಿ ಹುಲಿಗಳ ಕಳೇಬರ ಕಂಡಿದ್ದು, ಕಳೆದ 15ರಿಂದ20 ದಿನಗಳ ಹಿಂದೆ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಹುಲಿಗಳ ದೇಹ ಸಂಪೂರ್ಣವಾಗಿ ಕೊಳೆತು ಹೋಗಿದೆ. ಕಲ್ಲು ಕ್ವಾರಿಯಲ್ಲಿ ಹುಲಿ ಹಾಗೂ ಮರಿ ಹುಲಿ ಎರಡು ಕೆಲವೇ ಅಂತರದಲ್ಲಿ ಮೃತಪಟ್ಟಿರುವುದರಿಂದ ಹುಲಿಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಗುರುವಾರ ಡಿ.7 ರಂದು ಸಂಜೆ ಜಾನುವಾರುಗಳನ್ನು ಮೇಯಿಸುವ ವೇಳೆಯಲ್ಲಿ ಪೊದೆಯ ಕಡೆಯಿಂದ ಕೊಳೆತ ವಾಸನೆ ಬರುತ್ತಿರುವುದನ್ನು ಗಮವಿಸಿ ಪೊದೆಯ ಕಡೆಗೆ ತೆರಳಿ ನೋಡಿದಾಗ ಹುಲಿಗಳು ಕೊಳೆತ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಸ್ಥಳಕ್ಕೆ ಚಾಮರಾಜನಗರ ವನ್ಯಜೀವಿ ಉಪವಿಭಾಗದ ಎಸಿಎಫ್ ಹಾಗೂ ಪ್ರಾದೇಶಿಕ ವಲಯದ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದರು.

ಇಂದು (ಡಿ. 08 ಶುಕ್ರವಾರ) ಬೆಳಗ್ಗೆ ಶ್ವಾನದಳದೊಂದಿಗೆ ಪೊಲೀಸರು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಎರಡು ಹುಲಿಗಳ ಕಳೇಬರ ಕೆಲವೇ ಅಂತರದಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹುಲಿಗಳ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ವಿಷ ಪ್ರಾಶನವಾಗಿರುವ ಪ್ರಾಣಿಗಳನ್ನು ತಿಂದು ಹುಲಿಗಳು ಮೃತಪಟ್ಟಿರ ಬಹುದು ಎಂದು ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಸಾವಿನ ಸ್ಪಷ್ಟ ಮಾಹಿತಿ ತಿಳಿಯಲಿದೆ.

Related