ನಿಟ್ಟುಸಿರು ಬಿಟ್ಟ ಜಿಲ್ಲೆಯ ಜನ

ನಿಟ್ಟುಸಿರು ಬಿಟ್ಟ ಜಿಲ್ಲೆಯ ಜನ

ಚಾಮರಾಜನಗರ : ಚಾಮರಾಜನಗರದಲ್ಲಿ ಮಹಾರಾಷ್ಟ್ರ ಮೂಲದ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಇದರಿಂದಾಗಿ ಹಸಿರು ವಲಯದಲ್ಲಿದ್ದ ಗಡಿ ಜಿಲ್ಲೆಯ ಜನತೆಗೆ ಆತಂಕ ಶುರುವಾಗಿತ್ತು. ಅದೃಷ್ಟವಶಾತ್ ಈ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 24 ಮಂದಿಯ ವರದಿ ನೆಗೆಟಿವ್ ಬಂದಿದೆ. ಈ ಮೂಲಕ ಜಿಲ್ಲೆಯ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

ಜಿಲ್ಲೆಯಲ್ಲಿರುವ ತನ್ನ ಮನೆಗೆ ತಾಯಿಯನ್ನು ಬಿಟ್ಟು ಹೋಗಲು ಮಹಾರಾಷ್ಟ್ರದ ಮುಂಬೈನಿಂದ ಬಂದಿದ್ದ ವೈದ್ಯಕೀಯ ವಿದ್ಯಾರ್ಥಿಗೆ ಕೊರೋನಾ ದೃಢ ಪಟ್ಟಿದೆ. ಈ ಹಿನ್ನಲೆಯಲ್ಲಿ ದ್ವಿತೀಯ ಸಂಪರ್ಕದ 23 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು.

24 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಚಾಮರಾಜನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ 24 ಮಂದಿಯ ವರದಿ ನೆಗೆಟಿವ್ ಬಂದಿದ್ದು, ಜಿಲ್ಲೆಯ ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದ್ದಾರೆ.

ಕೋವಿಡ್-19 ದೃಢಪಟ್ಟಿದ್ದ ವೈದ್ಯಕೀಯ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಗುಣಮುಖರಾಗುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇವರ ಗಂಟಲು ದ್ರವ ಮಾದರಿ ಪರೀಕ್ಷೆಯನ್ನು ಸಹ ನಡೆಸಲಾಗಿತ್ತು ಈ ವೇಳೆ ವೈದ್ಯಕೀಯ ವಿದ್ಯಾರ್ಥಿಗೆ ಕೊರೋನಾ ದೃಢಪಟ್ಟಿತ್ತು. ಈತನ ತಾಯಿ ಹಾಗೂ ಜೊತೆಯಲ್ಲಿ ಬಂದಿದ್ದ ಈತನ ಮತ್ತೊಬ್ಬ ಸಹೋದರನ ವರದಿ ನೆಗೆಟಿವ್ ಬಂದಿತ್ತು.

Related