ಜಿಲ್ಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭ

ಜಿಲ್ಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭ

ಕಲಬುರ್ಗಿ : ನಗರದ ಅನ್ನಪೂರ್ಣ ಕ್ರಾಸ್ ಬಳಿಯ ಸಮಾಜ ಕಲ್ಯಾಣ ಇಲಾಖೆಯ 500 ಹಾಸಿಗೆ ಸಾಮರ್ಥ್ಯದ ವಸತಿ ನಿಲಯವನ್ನು ಜಿಮ್ಸ್ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದ್ದು, ಶುಕ್ರವಾರದಿಂದ ಕಾರ್ಯಾರಂಭ ಮಾಡಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ ತಿಳಿಸಿದರು.

ಈ ವೇಳೆ ಮಾತನಾಡಿ, ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿ. 500 ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಸದ್ಯ 50 ಬೆಡ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಮುಂದೆ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಲ್ಲಿ ಅದಕ್ಕನುಗುಣವಾಗಿ ಹಾಸಿಗೆಯನ್ನು ಹೆಚ್ಚಿಸಲಾಗುವುದು ಎಂದರು.

36 ಆಮ್ಲಜನಕ ಕಾನ್ಸಂಟ್ರೇಟರ್‌ಗಳಿದ್ದು, ಉಸಿರಾಟ ಸಮಸ್ಯೆ ಇರುವ ರೋಗಿಗಳಿಗೆ ಇದು ನೆರವಾಗಲಿದೆ. ಓರ್ವ ಫಾರ್ಮಾಸಿಸ್ಟ್ ಸಹ ನಿಯೋಜಿಸಿದೆ. ಅಗತ್ಯ ಔಷಧಿಗಳು ಸ್ಥಳದಲ್ಲಿಯೆ ಲಭ್ಯವಿರಲಿವೆ ಎಂದರು.

ಕೋವಿಡ್ ಸೋಂಕಿತರಿಗೆ ದಿನದ 24 ಗಂಟೆ ಚಿಕಿತ್ಸೆ ನೀಡಲು 3 ಪಾಳಿಯಲ್ಲಿ ಒಟ್ಟು 3 ಎಂ.ಬಿ.ಬಿ.ಎಸ್ ವೈದ್ಯರು, 6 ಸ್ಟಾಫ್ ನರ್ಸ್, 6 ಗ್ರೂಪ್ ಡಿ ನೌಕರರನ್ನು ನಿಯೋಜಿಸಲಾಗಿದೆ. ಜಿಲ್ಲಾಡಳಿತದಿಂದಲೇ ರೋಗಿಗಳಿಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ.

ತುರ್ತು ಸಂದರ್ಭದಲ್ಲಿ ಉಪಯೋಗಕ್ಕೆ ಆಂಬ್ಯುಲೆನ್ಸ್ ಸಹ ಲಭ್ಯವಿರಲಿದೆ ಎಂದು ಡಾ.ಶರಣಬಸಪ್ಪ ವಿವರಿಸಿದರು.
ಈ ವೇಳೆ ಡಾ.ಶರಣಬಸಪ್ಪ ಕ್ಯಾತನಾಳ, ತಾಲ್ಲೂಕು ಆರೋಗ್ಯಧಿಕಾರಿ ಡಾ. ಮಾರುತಿ ಕಾಂಬಳೆ ಇದ್ದರು.

Related