ಹಳ್ಳಿಗಳತ್ತ ವೈದ್ಯರ ನಡಿಗೆ ನೀಡಿದ ಫಲ

ಹಳ್ಳಿಗಳತ್ತ ವೈದ್ಯರ ನಡಿಗೆ ನೀಡಿದ ಫಲ

ಬೆಂಗಳೂರು : ಗ್ರಾಮೀಣ ಭಾಗದಲ್ಲಿ ಕೊರೋನಾ ಸೋಂಕು ಹರಡುವಿಕೆ ತಡೆಯಲು ರೂಪಿಸಿದ ಹಳ್ಳಿಗಳ ಕಡೆಗೆ ವೈದ್ಯರ ನಡಿಗೆ ಉತ್ತಮ ಫಲ ನೀಡಿದೆ. ಕೊರೋನಾ ತಡೆ ಮಾತ್ರವಲ್ಲದೆ ಗ್ರಾಮೀಣ ಜನರ ಆರೋಗ್ಯ ಸ್ಥಿತಿಗತಿಯ ನೈಜ ಚಿತ್ರಣವೂ ದೊರೆತಂತಾಗಿದೆ.

ನಿತ್ಯ ಪ್ರತೀ ಜಿಲ್ಲೆಯ 160ರಿಂದ 180 ಗ್ರಾಮಗಳಿಗೆ ವೈದ್ಯರು ಮತ್ತು ಸಿಬಂದಿ ಭೇಟಿ ನೀಡುತ್ತಿದ್ದು, 10 ಸಾವಿರ ಜನರ ಕೊರೋನಾ ತಪಾಸಣೆ ಮಾಡಲಾಗುತ್ತಿದೆ. ಈಗಾಗಲೇ ಪ್ರತೀ ಜಿಲ್ಲೆಯಲ್ಲಿ ಒಂದು ಲಕ್ಷದ ವರೆಗೆ ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ.

ಸರಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಬಳಸಿ ಕೊಂಡು ತಪಾಸಣೆ ಕೈಗೊಳ್ಳಲಾಗುತ್ತಿದೆ. ಇತರ ಆರೋಗ್ಯ ಸಮಸ್ಯೆಗಳಿಗೆ ಸಂಚಾರಿ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ನೀಡಿ, ಕೊರೋನಾ ಲಕ್ಷಣ ಇರುವವರಿಗೆ ರ‍್ಯಾಪಿಡ್ ಆಂಟಿಜೆನ್ ಪರೀಕ್ಷೆ ಮಾಡಲಾಗುತ್ತಿದೆ.
6.16 ಲಕ್ಷ ಪ್ರಕರಣಗಳು ಕೊರೋನಾ ನಿಯಂತ್ರಣ ನಿಟ್ಟಿನಲ್ಲಿ ಗ್ರಾಮೀಣ ಭಾಗ  ದಲ್ಲಿ ಸೋಂಕುಪೀಡಿತರ ಆರೈಕೆಗಾಗಿ 14,355 ಕೇಂದ್ರಗಳನ್ನು ತೆರೆದಿದ್ದು, 2 ಲಕ್ಷ ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದ ಗ್ರಾಮೀಣ ಭಾಗದಲ್ಲಿ ಕೊರೋನಾ ಸೋಂಕಿನ ಮೊದಲನೆಯ ಮತ್ತು ಎರಡನೆಯ ಅಲೆಯಲ್ಲಿ ಒಟ್ಟು 6,16,439 ಸೋಂಕು ಪ್ರಕರಣಗಳು ಪತ್ತೆಯಾಗಿವೆ. 18 ವರ್ಷದಿಂದ ಮೇಲ್ಪಟ್ಟವರು 5,56,653 ಮತ್ತು 18 ವರ್ಷಕ್ಕಿಂತ ಕೆಳಗಿನವರು 59,786 ಮಂದಿ ಇದ್ದು, 4,844 ಮಂದಿ ಮೃತಪಟ್ಟಿದ್ದಾರೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕೊರೋನಾ ಜತೆಗೆ ಗ್ರಾಮೀಣ ಭಾಗದ ಜನರ ಇತರ ಆರೋಗ್ಯ ಸಮಸ್ಯೆಗಳ ಬಗ್ಗೆಯೂ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಹಳ್ಳಿಗಳತ್ತ ವೈದ್ಯರ ತಂಡ ಭೇಟಿಯಿಂದ ಅಲ್ಲಿನ ಸ್ಪಷ್ಟ ಚಿತ್ರಣವೂ ಲಭಿಸುತ್ತಿದೆ ಎಂದು ಆರ್. ಅಶೋಕ್, ಕಂದಾಯ ಸಚಿವ ಹೆಳಿದರು.

Related