ಎಲ್ಲೆಡೆ ʼಕಾವೇರಿʼದ ಕಿಚ್ಚು

ಎಲ್ಲೆಡೆ ʼಕಾವೇರಿʼದ ಕಿಚ್ಚು

ಬೆಂಗಳೂರು,ಸೆ. 23: ಎಲ್ಲೆಡೆ ‘ಕಾವೇರಿ’ ಕಿಚ್ಚು ಜೋರಾಗಿದ್ದು, ಮಂಡ್ಯ ಬಂದ್ ಬಹುತೇಕ ಯಶಸ್ವಿಯಾಗಿದ್ದು, ಬಿಜೆಪಿ ಕೂಡ ಪ್ರತಿಭಟನೆ ನಡೆಸಿದ್ದು ಅದಲ್ಲದೆ ಈಗ ಬೆಂಗಳೂರು ಬಂದ್ ಗೂ ಕರೆ ನೀಡಲಾಗಿದೆ.

ಸೆಪ್ಟೆಂಬರ್ 26ರಂದು ಬೆಂಗಳೂರು ಬಂದ್ ಗೆ ವಿವಿಧ ಸಂಘಟನೆಗಳು ಕರೆ ನೀಡಿದ್ದು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ತೀವ್ರ ಪ್ರತಿಭಟನೆ ನಡೆಸಿದ ರಾಜ್ಯ ಬಿಜೆಪಿ ನಾಯಕರು ಬೆಂಗಳೂರು ಬಂದ್ ಗೆ ಸಾಥ್ ನೀಡಿದ್ದಾರೆ.

ರಾಜ್ಯದ ಆಡಳಿತ ಶಕ್ತಿ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ಪ್ರತಿಭಟನೆ, ಬಂದ್ ನಡೆಸಿದರೆ ರಾಜ್ಯ ಸರ್ಕಾರದ ಗಮನವನ್ನು ಹೆಚ್ಚಿನ ಮಟ್ಟಿಗೆ ಸೆಳೆದು ಕೇಂದ್ರದ ಮೇಲೆ ಮತ್ತು ಕಾನೂನಾತ್ಮಕವಾಗಿ ಕಾವೇರಿ ನೀರಿಗಾಗಿ ಮುಂದಿನ ದಿನಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಹೋರಾಟ ನಡೆಸಲು ಉತ್ತಮ ಎಂದು ವಿವಿಧ ಸಂಘಟನೆಗಳು ಬೆಂಗಳೂರು ಬಂದ್ ಗೆ ಕರೆ ನೀಡಲು ತೀರ್ಮಾನಿಸಿವೆ.

ಈ ವೇಳೆ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ನಿಮಗೆ ಯೋಗ್ಯತೆ ಇದ್ದರೆ ಸಮಸ್ಯೆ ಪರಿಹಾರ ಮಾಡಿ. ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಎಲ್ಲರೂ ಸೇರಿ ನಾವು ಬೆಂಗಳೂರಿನಲ್ಲಿ ದೊಡ್ಡ ಹೋರಾಟ ಮಾಡುತ್ತೇವೆ. ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಿಕೊಡಬೇಕು ಎಂದು ದೇವೇಗೌಡರು ಕೂಡಾ ಹೇಳಿದ್ದಾರೆ. ಕಾಂಗ್ರೆಸ್ ಮುಖಂಡರು ತಮಿಳುನಾಡು ಏಜೆಂಟರಂತೆ ವರ್ತನೆ ಖಂಡನೀಯ ಎಂದು ಆಕ್ರೋಶ ಹೊರ ಹಾಕಿದರು. ಪ್ರತಿಭಟನೆ ವೇಳೆ ಬಿಎಸ್​ ಯಡಿಯೂರಪ್ಪರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾವೇರಿ ನದಿ ವಿಚಾರದಲ್ಲಿ ರಾಜ್ಯ ಸರ್ಕಾರ ಸೂಕ್ತ ವಾದ ಮಂಡಿಸಿಲ್ಲ ಎಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸರ್ಕಾರ ನಮ್ಮ ಹಾಗೂ ತಮಿಳುನಾಡು ಡ್ಯಾಮ್​ಗಳ ಮಾಹಿತಿ ಪಡೆಯಬೇಕಿತ್ತು. ಎರಡೂ ರಾಜ್ಯಗಳ ಡ್ಯಾಮ್​​​​​​ಗಳ ಸ್ಥಿತಿ ಬಗ್ಗೆ ಸೂಕ್ತ ವಾದ ಮಂಡಿಸಿಲ್ಲ. ಕಾವೇರಿ ಪ್ರಾಧಿಕಾರದ ಸಭೆಗೆ ನಮ್ಮವರು ವರ್ಚುವಲ್​ ಮೂಲಕ ಹಾಜರಾಗಿದ್ದರು. ಕಾವೇರಿ ನದಿ ವಿಚಾರದಲ್ಲಿ ಕೇಂದ್ರದಿಂದ ಎಲ್ಲ ರೀತಿಯ ಸಹಕಾರ ನೀಡಿದ್ದೇವೆ. ಮುಂದೆಯೂ ಸಹಕಾರ ನೀಡುತ್ತೇವೆ ಎಂದರು.

Related