ಜನಹಿತಕ್ಕಾಗಿ ಬಂದ ಚಾಲಕ ಸೇರಿದ್ದು ಮಸಣ

ಜನಹಿತಕ್ಕಾಗಿ ಬಂದ ಚಾಲಕ ಸೇರಿದ್ದು ಮಸಣ

ಜಮಖಂಡಿ : ಸಾರಿಗೆ ನೌಕರರ ಬೇಡಿಕೆ, ಹಠಕ್ಕೆ ಬಿದ್ದ ಸರ್ಕಾರ ಆದರೆ ಜೀವ ಕಳೆದುಕೊಂಡ ಚಾಲಕ.

6ನೇ ವೇತನ ಪರಿಷ್ಕರಣೆ ಮಾಡಿ ಎಂದು ಬೀದಿಗಿಳಿದ ಸಾರಿಗೆ ನೌಕರರು ಒಂದೆಡೆಯಾದರೆ, ಪ್ರತಿ ದಿನ ಬಸ್‌ಗಳಲ್ಲೆ ಪ್ರಯಾಣ ಮಾಡುವ ಸಾರ್ವಜನಿಕರ ಪಾಡು ಇನ್ನೊಂದೆಡೆ. ಸಾರಿಗೆ ನೌಕರರು ಬಿಗಿಪಟ್ಟಿಡಿದು ನಾವು ಯಾವುದಕ್ಕೂ ಜಗ್ಗುವುದಿಲ್ಲವೆಂದು ಕುಂತರು. ಇನ್ನೊಂದೆಡೆ ಕೆಲ ನೌಕರರು ಜನಹಿತಕ್ಕಾಗಿ ಚಾಲನೆಗೆ ಅಸ್ತು ಎಂದರು.

ಇಂದು ಬೆಳಿಗ್ಗೆ ಜಮಖಂಡಿ ಬಸ್ ಡಿಪೋ ವ್ಯವಸ್ಥಾಪಕರು ಚಾಲಕ ನಬೀರವುಸಲ್ ಅವಟಿಯವರ ಮನೆಗೆ ತೆರಳಿ ಒತ್ತಾಯಪೂರ್ವಕವಾಗಿ ಕೆಲಸಕ್ಕೆ ಕರೆದುಕೊಂಡು ಹೋಗಿದ್ದಾರೆ. ಜನರ ಹಿತವನ್ನು ಕಾಪಾಡಲು ನಬೀರವುಸಲ್ ಸಹ ಒಪಿ ಚಾಲನೆ ಮಾಡಿದ್ದಾರೆ. ಜಮಖಂಡಿ ಬಸ್ ಡಿಪೋನಿಂದ ಘತ್ತರಗಾ ಹೋಗಿ ವಾಪಸ್ಸು ಬರುವಾಗ ಕವಟಗಿ ಕ್ರಾಸ್ ಹತ್ತಿರ ಬಸ್‌ಗೆ ಕಲ್ಲು ಎಸೆದ ಪರಿಣಾಮ ಚಾಲಕ ತೀವ್ರ ಗಾಯಗೊಂಡಿದ್ದಾರೆ.

ಕೂಡಲೇ ಜಮಖಂಡಿ ಉಪವಿಭಾಗ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಬೀರವುಸಲ್ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಸಾರಿಗೆ ನೌಕರರು ಯಾವುದೇ ಬೆದರಿಕೆಗೆ ಹೆದರದೇ ಕೆಲಸಕ್ಕೆ ಹಾಜರಾಗಿ ಎಂದು ಹೇಳುತ್ತಿದ್ದ ರಾಜ್ಯ ಸರ್ಕಾರ ಏನು ಮಾಡುತ್ತಿದೆ ಎಂದು ಅವರ ಕುಟುಂಬದವರು ಹಿಡಿ ಶಾಪ ಹಾಕುತ್ತಿದ್ದಾರೆ. ಮೃತ ಚಾಲಕನಿಗೆ ನಾಲ್ಕು ಜನ ಮಕ್ಕಳು, ಮಡದಿಯಿದ್ದು, ದುಡಿಯುವ ಏಕೈಕ ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಕರುಳು ಚುರುಕ್ ಎನಿಸುತ್ತದೆ. ಇಂತಹ ಅಮಾನವೀಯ ಘಟನೆಗೆ ಸಮಾಜ ತಲೆತಗ್ಗಿಸಲೇಬೇಕು

Related