ನಿಷ್ಠಾ ತರಬೇತಿ ಬಹಿಷ್ಕರಿಸಿದ ಶಿಕ್ಷಕರು

ನಿಷ್ಠಾ ತರಬೇತಿ ಬಹಿಷ್ಕರಿಸಿದ ಶಿಕ್ಷಕರು

ನಿಡಗುಂದಿ : 2017ರ ತಿದ್ದುಪಡಿ ಮಾಡಿರುವ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮದಿಂದ ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಗಿರುವ ಅನ್ಯಾಯಕ್ಕೆ ಸಂಘದ ಮನವಿಗೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಕಾರಣ, ಅ-1 ರಿಂದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆರಂಭಗೊಂಡ ನಿಷ್ಠಾ -3 ಆನ್‌ಲೈನ್ ತರಬೇತಿ ಬಹಿಷ್ಕರಿಸುವ ಮನವಿಯನ್ನು ಸೋಮವಾರ ನಿಡಗುಂದಿಗೆ ಆಗಮಿಸಿದ್ದ ಬಸವನಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಿಕ್ಷಕ ಸಂಘಟನೆಯ ಪದಾಧಿಕಾರಿಗಳು ನೀಡಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ. ಗೌಡರ ಮಾತನಾಡಿ, ಈಗಾಗಲೇ ಶಿಕ್ಷಕರಿಗೆ ಈ ಬಗ್ಗೆ ಆಗಿರುವ ಅನ್ಯಾಯದ ಬಗ್ಗೆ ಹಲವು ಬಾರಿ ಕ.ರಾ.ಪ್ರಾ.ಶಾ.ಶಿ.ಸಂಘವು ಮನವಿ ಹಾಗೂ ಹಲವು ರೀತಿಯ ಹಕ್ಕೊತ್ತಾಯಗಳಿಗೆ ಪರಿಹಾರ ಸಿಗದೇ ಇದ್ದಲ್ಲಿ, ಪದವೀಧರ ಶಿಕ್ಷಕರ ಸಮಸ್ಯೆಯ ಪರಿಹಾರಕ್ಕಾಗಿ ಹಾಗೂ ಸೇವಾನಿರತ ಪದವೀಧರ ಶಿಕ್ಷಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವವರೆಗೂ ನಿಷ್ಠಾ 3.0 ತರಬೇತಿಯಲ್ಲಿ ಲಾಗಿನ್ ಆಗದೇ ತರಬೇತಿಯನ್ನು ಬಹಿಷ್ಕರಿಸಲು ತೀರ್ಮಾನಿಸಿದೆ.

ಇಲಾಖೆಯಿಂದ ಈ ಬಗ್ಗೆ ಅತೀ ಶೀಘ್ರದಲ್ಲಿ ಪರಿಹಾರ ದೊರಕದೇ ಹೋದಲ್ಲಿ ಹಂತ ಹಂತವಾಗಿ ಹೋರಾಟಗಳನ್ನು ರೂಪಿಸುವ ನಿಲುವನ್ನು ಸಂಘಟನೆ ನಿರ್ಧರಿಸಿದೆ. ಈ ಹೋರಾಟಗಳಿಗೆ ಸಂಘಟನೆಯು ಜವಾಬ್ದಾರಿಯಾಗಿರದೆ ಇಲಾಖೆಯ ಅಧಿಕಾರಿಗಳಿಂದ ಸೇವಾನಿರತ ಪದವೀಧರ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ದೊರಕದೇ ಇರುವುದೇ ಕಾರಣವಾಗಿರುತ್ತದೆ ಎಂದು ಅವರು ತಿಳಿಸಿದರು.

ಮನವಿ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ, ಮನವಿಯನ್ನು ಹಿರಿಯ ಅಧಿಕಾರಿಗಳಿಗೆ ಕಳುಹಿಸಲಾಗುವುದು ಎಂದರು.

ಸಂಘದ ತಾಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮುಕಾರ್ತಿಹಾಳ, ಪ್ರಧಾನ ಕಾರ್ಯದರ್ಶಿ ಸಲೀಂ ದಡೇದ, ಆರ್.ಎಸ್. ಕಮತ, ಎಂ.ಎಂ. ಮುಲ್ಲಾ, ಸಂಗಮೇಶ ಮಡಿಕೇಶ್ವರ, ಬಿ.ಐ. ಚಲ್ಮಿ, ಎಸ್.ಎಂ. ಕಮತಗಿ, ಕಮಲು ಗುಡದಿನ್ನಿ, ಎಂ.ಎನ್. ಪೂಜಾರ, ಪಿ.ಎಚ್. ಪೂಜಾರ ಇನ್ನೀತರರು ಇದ್ದರು.

Related