2 ದಿನದ ವೇತನ ಕೊಡಿ ಎಂದ ಸಚಿವ

2 ದಿನದ ವೇತನ ಕೊಡಿ ಎಂದ ಸಚಿವ

ಬೆಂಗಳೂರು: ಕೊರೋನಾ ಹಿನ್ನೆಲೆ ಆರ್ಥಿಕವಾಗಿ ತೀವ್ರ ದುಃಸ್ಥಿತಿಯಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಖಾಸಗಿ ಅನುದಾನ ರಹಿತ ಶಾಲೆಗಳ ಶಿಕ್ಷಕರ ನೆರವಿಗೆ ಇಲಾಖೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರು ಧಾವಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.

ಸೋಮವಾರ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಸಚಿವರು, ಖಾಸಗಿ ಶಾಲಾ ಶಿಕ್ಷಕರು ತೀವ್ರ ಸಂಕಷ್ಟದಲ್ಲಿರುವುದನ್ನು ನಮ್ಮ ಇಲಾಖೆ ಗಮನಿಸಿದೆ. ಈ ಕುರಿತು ಸಾರ್ವಜನಿಕವಾಗಿಯೂ ಹೆಚ್ಚಿನ ಕಳಕಳಿ ವ್ಯಕ್ತವಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಅವರ ನೆರವಿಗೆ ನಾವು ಧಾವಿಸುವುದು ಅಗತ್ಯವೆಂಬುದನ್ನು ನಾವೆಲ್ಲರೂ ಕಂಡುಕೊಳ್ಳಬೇಕಾದ ಸಂದರ್ಭ ಇದಾಗಿದೆ ಎಂದರು.

ಇದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿಯೂ ಆಗಿದೆ. ಹಾಗಾಗಿ ನಮ್ಮ ಶಿಕ್ಷಕ ಬಂಧುಗಳು ಒಂದು ಇಲ್ಲವೇ ಎರಡು ದಿನಗಳ ವೇತನವನ್ನು ನೀಡುವ ಮೂಲಕ ನಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕಾಗಿದೆ ಎಂದು ಹೇಳಿದ್ದಾರೆ.

ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರ ನೆರವಿಗೆ ಹೇಗೆ ಬರಬಹುದೆಂಬ ಕುರಿತು ಸರ್ಕಾರದ ಮಟ್ಟದಲ್ಲಿಯೂ ಚಿಂತನೆ ನಡೆದಿದೆ. ಇಲಾಖೆಯ ಲಭ್ಯ ಸಂಪನ್ಮೂಲಗಳ ಮೂಲಕವೂ ಕಷ್ಟದಲ್ಲಿರುವ ನಮ್ಮ ಶಿಕ್ಷಕರಿಗೆ ಇತಿಮಿತಿಗಳಲ್ಲಿ ಆರ್ಥಿಕ ಸಹಕಾರ ನೀಡಲು ಸರ್ಕಾರ ಸಹ ಅವಕಾಶಗಳನ್ನು ಅವಲೋಕಿಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

Related