ಪಕ್ಷಾತೀತವಾಗಿ ಪಾದಯಾತ್ರೆ ಬೆಂಬಲಿಸಿ

ಪಕ್ಷಾತೀತವಾಗಿ ಪಾದಯಾತ್ರೆ ಬೆಂಬಲಿಸಿ

ತುಮಕೂರು : ಒಳಮೀಸಲಾತಿಗೆ ಆಗ್ರಹಿಸಿ ಮಾದಿಗ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯನ್ನು ಸಮುದಾಯದ ಮುಖಂಡರು ಪಕ್ಷಾತೀತವಾಗಿ ಬೆಂಬಲಿಸಬೇಕು ಎಂದು ಸಮುದಾಯದ ಮುಖಂಡ ಹಾಗೂ ತುಮಕೂರು ನಗರಸಭೆ ಮಾಜಿ ಉಪಾಧ್ಯಕ್ಷ ವಾಲೆ ಚಂದ್ರಯ್ಯ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಸ್ವಾಮೀಜಿಗಳ ಮುಂದಾಳತ್ವದಲ್ಲಿ ಮಾದಿಗರ ಚೈತನ್ಯ ರಥಯಾತ್ರೆ ತುಮಕೂರು ಜಿಲ್ಲೆಗೆ ಬರಲಿದೆ. ಈ ವೇಳೆ ಬುದ್ಧಿಜೀವಿಗಳು, ಪ್ರಗತಿಪರರು, ಮಾದಿಗ ಸಮುದಾಯದ ಮುಖಂಡರು ಕೈಜೋಡಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ದಸಂಸ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಎನ್.ರಾಮಯ್ಯ, ರಾಜ್ಯದಲ್ಲಿ ಇದುವರೆಗೂ ಅಧಿಕಾರ ನಡೆಸಿದ ಮೂರು ರಾಜಕೀಯ ಪಕ್ಷಗಳು ಒಳಮೀಸಲಾತಿ ನೀಡುವ ನಾಟಕವಾಡಿ ಮೋಸ ಮಾಡಿವೆ. ಮೂರು ಪಕ್ಷಗಳಲ್ಲಿರುವ ರಾಜಕಾರಣಿಗಳು ಒಳಮೀಸಲಾತಿ ಪರವಾಗಿ ನಿಲ್ಲುವಂತೆ ತಮ್ಮ ಪಕ್ಷಗಳ ಹೈಕಮಾಂಡ್ ಮೇಲೆ ಒತ್ತಡ ಹೇರಬೇಕು ಎಂದರು.

ಮುಖಂಡರಾದ ಗೂಳೂರು ರಾಯಣ್ಣ, ನಟರಾಜ್, ಎ.ನಾಗೇಶ್, ಎಚ್.ಬಿ.ರಾಜೇಶ್, ಎ.ಸುನೀಲ್, ಪೂಜಾ ಹನುಮಯ್ಯ, ರಾಮಸ್ವಾಮಿ, ಹೆಬ್ಬತನಹಳ್ಳಿ ಶ್ರೀನಿವಾಸ್, ರಾಜಣ್ಣ, ರಾಮಯ್ಯ, ಮೋಹನ್, ವಕ್ಕೊಡಿ ಶಿವಣ್ಣ, ಚೇಳೂರು ವೆಂಕಟೇಶ್, ಗೂಳರಿವೆ ನಾಗರಾಜು, ಶಿವರಾಜು ವಡವನಘಟ್ಟ, ರಂಗಸ್ವಾಮಯ್ಯ, ರಾಘವೇಂದ್ರಸ್ವಾಮಿ ಸಭೆಯಲ್ಲಿ ಪಾಲ್ಗೊಂಡಿದ್ದರು.

Related