ಸಿರವಾರದ ಪೌರ ಕಾರ್ಮಿಕರಿಗಿಲ್ಲ ಸಂಬಳ !

ಸಿರವಾರದ ಪೌರ ಕಾರ್ಮಿಕರಿಗಿಲ್ಲ ಸಂಬಳ !

ರಾಯಚೂರು: ಕೊರೊನಾ ಹಿನ್ನೆಲೆ ಪೌರ ಕಾರ್ಮಿಕರ ಜೀವನ ಕಷ್ಟಕರವಾಗಿದೆ. ಪೌರರಿಗೆ ಹತ್ತು ತಿಂಗಳಿಂದ 10 ರೂಪಾಯಿ ಇಲ್ಲ.

ಪಟ್ಟಣದ ಪ್ರತಿ ವಾರ್ಡ್ ಮೂಲೆ, ಮೂಲೆಗಳನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರನ್ನು ಅಧಿಕಾರಿಗಳು ಕಸಕ್ಕಿಂತ ಕೀಳಾಗಿ ಕಾಣುತ್ತಿರುವುದರಿಂದ ಸ್ವಚ್ಛತೆ ಕಡೆ ಕೊಂಚವೂ ಗಮನ ಹರಿಸುತ್ತಿಲ್ಲ.

ಕೊರೊನಾ ಹೆಮ್ಮಾರಿಯ ಕರಿನೆರಳಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಎದುರು ಸಂಕಷ್ಟಗಳ ಸರಮಾಲೆಯೇ ಇದೆ. ಕೊರೊನಾ ಹೆಮ್ಮಾರಿ ಜಗತ್ತನ್ನು ಆವರಿಸುತ್ತದಕ್ಕಿಂತ ಮುಂಚಿನಿಂದ ಇಲ್ಲಿಯವರೆಗೆ ಪಟ್ಟಣ ಪಂಚಾಯಿತಿ ಇವರ ವೇತನವನ್ನು ಪಾವತಿಸಿಲ್ಲ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 20 ವಾರ್ಡಗಳಿದ್ದು, ಮೂವತ್ತು ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಕಾಯಂ ಪೌರಕಾರ್ಮಿಕರ ಜೊತೆಗೆ ಕೆಲವು ಗುತ್ತಿಗೆ ಆಧಾರದ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಕಾಯಂ ಹಾಗೂ ಗುತ್ತಿಗೆ ಆಧಾರಿತ ಪೌರಕಾರ್ಮಿಕರಿಗೆ ಕಳೆದ 10 ತಿಂಗಳಿಂದ ಸಂಬಳ ಬಾರದಿದ್ದರೂ, ಅಧಿಕಾರಿಗಳು ಅಥವಾ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ.

ಪಟ್ಟಣ ಪಂಚಾಯತಿಯಲ್ಲಿ ಚಾಲಕ, ಎಲೆಕ್ಟ್ರಿಷಿಯನ್, ಲೋಡರ್, ವಾಟರ್ ಮ್ಯಾನ್, ಸ್ವಚ್ಛತೆ ಮಾಡುವವರು, ಕಂಪ್ಯೂಟರ್ ಆಪರೇಟರ್ ಹಾಗೂ ಸಹಾಯಕ ಗುತ್ತಿಗೆದಾರರು ಸೇರಿ 19 ಕ್ಕೂ ಅಧಿಕ ಸಿಬ್ಬಂದಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲರಿಗೂ ಕಳೆದ 10 ತಿಂಗಳಿಂದ ಸಂಬಳ ಬಿಡುಗಡೆಯಾಗಿಲ್ಲ. ನಾಲ್ವರು ದಿನಗೂಲಿ ನೌಕರರಿಗೆ 12 ತಿಂಗಳ ವೇತನ ಬಂದಿಲ್ಲ.

ಭವಿಷ್ಯವೇ ಇಲ್ಲದ ನಿಧಿ:
ಪೌರ ಕಾರ್ಮಿಕರ ಹೆಸರಿನಲ್ಲಿ ಪಟ್ಟಣ ಪಂಚಾಯತಿಯಿಂದ ತಿಂಗಳಿಗೊಮ್ಮೆ ಭವಿಷ್ಯ ನಿಧಿ ಕಟ್ಟಬೇಕೆಂಬ ನಿಯಮವನ್ನು ಗಾಳಿಗೆ ತೂರಲಾಗಿದೆ. ಇನ್ನು ಸಾಮಾನ್ಯ ನಿಧಿಯಿಂದ ದಿನಗೂಲಿ ನೌಕರರಿಗೆ ಸಂಬಳ ನೀಡಬೇಕು ಎಂಬ ನಿಯಮವಿದ್ದರೂ ಪಾಲನೆ ನಿರ್ಲಕ್ಷಿಸಲಾಗಿದೆ. ವೇತನದ ಜೊತೆಗೆ ಮೂಲಸೌಲಭ್ಯಗಳನ್ನು ನೀಡುವಲ್ಲಿ ಪಟ್ಟಣ ಪಂಚಾಯತಿ ಎಡವಿದೆ ಎಂಬುದು ಪೌರರ ಅಳಲು.

ಕಾರ್ಮಿಕರಿಗಿಲ್ಲ ಸೌಲಭ್ಯಗಳು:

ಪೌರ ಕಾರ್ಮಿಕರೂ ಮನುಷ್ಯರೇ. ಆದರೆ ಗಬ್ಬೆದ್ದು ನಾರುವ ಚರಂಡಿಯಲ್ಲಿ ಮೈಮರೆತು ದುಡಿಯುವ ಅವರ ಗೋಳು ಮಾತ್ರ ಯಾರಿಗೂ ಬೇಡ. ನಮಗೆ ಕನಿಷ್ಠ ವೇತನವಿಲ್ಲ. ಕೈಗೆ ಗ್ಲೌಸ್ ಸೇರಿದಂತೆ ಯಾವುದೇ ಸುರಕ್ಷತಾ ಕ್ರಮಗಳಿಲ್ಲ. ಹೀಗಿರುವಾಗ ನಗರ ಶುಚಿಗೊಳಿಸಲು ಹೇಗೆ ಸಾಧ್ಯ ಎಂದು ಪೌರರು ಪ್ರಶ್ನಿಸುತ್ತಾರೆ.

**

ಲಾಕ್ ಡೌನ್ ನಿಂದಾಗಿ ಪಟ್ಟಣ ಪಂಚಾಯತಿಗೆ ಆದಾಯದ ಮೂಲದ ಕೊರತೆ ಉಂಟಾಗಿದೆ. ಆದಕಾರಣ ಸಂಬಳ ನೀಡಲು ಸಾದ್ಯವಾಗುತ್ತಿಲ್ಲ. ಮೇಲಿನಾಧಿಕಾರಿಗಳಿಗೆ ಮಾಹಿತಿಯನ್ನು ಈಗಾಗಲೇ ಕಳುಹಿಸಿದೇನೆ. ಲಾಕ್ ಡೌನ್ ಮುಗಿದ ನಂತರ ನನ್ನ ಮೊದಲ ಆದ್ಯತೆ ಎಲ್ಲಾ ಕಾರ್ಮಿಕರಿಗೆ ಸಂಬಳ ನೀಡುವುದು. ಕೊರೊನಾ ಹಿನ್ನಲೆ ಪೌರ ಕಾರ್ಮಿಕರಿಗೆ ನನ್ನ ಸ್ವಂತ ಹಣದಲ್ಲಿ ಮಾಸ್ಕ್, ಗ್ಲೌಸ್, ಸೋಪ್ ಗಳನ್ನು ಕೊಡಿಸಿದ್ದೇನೆ.

– ಮುನಿಸ್ವಾಮಿ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ.

Related