25 ವರ್ಷಗಳಾದ್ರೂ ಡಾಂಬರೀಕರಣ ಮಾಡದ ರಸ್ತೆಗಳು..!

25 ವರ್ಷಗಳಾದ್ರೂ ಡಾಂಬರೀಕರಣ ಮಾಡದ ರಸ್ತೆಗಳು..!

ಮಂಗಳೂರು, ಜು 20 : ರಾಜ್ಯ ಬಿಜೆಪಿ ಮುಖಂಡರಲ್ಲಿ ಸತತವಾಗಿ ವಿಧಾನಸಭೆಗೆ ಆಯ್ಕೆಯಾಗುತ್ತಿರುವ ಶಾಸಕರಲ್ಲಿ ಸುಳ್ಯ ಕ್ಷೇತ್ರದ ಎಸ್.ಅಂಗಾರ ಕೂಡಾ ಒಬ್ಬರು. ಜನಾನುರಾಗಿ ಶಾಸಕರೆಂದೇ ಹೆಸರಾಗಿರುವ ಅಂಗಾರ ಅವರ ಕ್ಷೇತ್ರದ ವ್ಯಾಪ್ತಿಗೆ ಬರುವ ಒಂದು ರಸ್ತೆ ಕೆಟ್ಟು, ಕಿತ್ತು ಹೋಗಿ ಎರಡೂವರೆ ದಶಕಗಳೇ ಕಳೆದು ಹೋಗಿದೆ.

ಯಾವ ಕಾರಣಕ್ಕಾಗಿ ಈ ರಸ್ತೆ ರಿಪೇರಿ ಭಾಗ್ಯ ಕಂಡಿಲ್ಲ ಎನ್ನುವುದಕ್ಕೆ ಸ್ಥಳೀಯರಲ್ಲಿ ಯಾವುದೇ ಬಲವಾದ ಕಾರಣಗಳಿಲ್ಲ. ಒಂದೋ ಸ್ಥಳೀಯರು ಮನವಿ ಮಾಡಿ ಮಾಡಿ ಹೈರಾಣವಾಗಿರಬಹುದು ಅಥವಾ ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರು ಅಸಡ್ದೆಯ ಪರಮಾವಧಿ ತೋರಿರಬಹುದು.

ಸುಳ್ಯ ವಿಧಾನಸಭಾ ಕ್ಷೇತ್ರದ ಗುತ್ತಿಗಾರರು – ಬಳಪ ರಸ್ತೆಯಲ್ಲಿ ದಿನವೊಂದಕ್ಕೆ ಸುಮಾರು ಇನ್ನೂರಕ್ಕೂ ಹೆಚ್ಚು ವಾಹನಗಳು ಓಡಾಡುತ್ತವೆ. ಸುಮಾರು ಐದು ಕಿಲೋಮೀಟರ್ ವಿಸ್ತಾರದ ಈ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಹೇಳಲಾಗುವುದಿಲ್ಲ.

ಯಾಕೆಂದರೆ, ಗುತ್ತಿಗಾರು ನಿಂದ ಎರಡು ಕಿ.ಮೀ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಮತ್ತೆ ಅಲ್ಲಿಂದ ಸುಮಾರು ಒಂದೂವರೆ ಕಿಲೋಮೀಟರ್ ರಸ್ತೆಗೆ ಡಾಂಬರ್ ಹಾಕಲಾಗಿದೆ. ಅದಾದ ನಂತರ ಮತ್ತದೇ ಸಮಸ್ಯೆ. ಮಳೆಗಾಲದಲ್ಲಂತೂ ಕೆಟ್ಟು ಹೋಗಿರುವ ರಸ್ತೆಯಲ್ಲಿ ಓಡಾಡುವುದೂ ಒಂದೇ, ಕಂಡದಲ್ಲಿ (ಗದ್ದೆ) ಓಡಾಡುವುದೂ ಒಂದೇ. ಐದು ಕಿಲೋಮೀಟರ್ ವ್ಯಾಪ್ತಿಯ ಗುತ್ತಿಗಾರು – ಬಳಪ ರಸ್ತೆಯ ಆರಂಭದಿಂದ ಕೊನೆಯವರೆಗೆ ಅದು ಬೇರೆ ಬೇರೆ ಪಂಚಾಯತಿ ವ್ಯಾಪ್ತಿಗೆ ಬರಬಹುದು.

Related