ಎಸಿಬಿ ರದ್ದಿಗೆ ಒತ್ತಾಯಿಸಿ ಮನವಿ

ಎಸಿಬಿ ರದ್ದಿಗೆ ಒತ್ತಾಯಿಸಿ ಮನವಿ

ತುಮಕೂರು : ಚುನಾವಣೆ ಪೂರ್ವದಲ್ಲಿ ಎಸಿಬಿ ರದ್ದು ಮಾಡಿ ಲೋಕಾಯುಕ್ತ ಬಲಗೊಳಿಸುವುದಾಗಿ ಬಿ.ಎಸ್.ಯಡಿಯೂರಪ್ಪ ಜನರಿಗೆ ಭರವಸೆ ನೀಡಿದ್ದರು. ಈಗ ಬಿಜೆಪಿಯು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಲೋಕಾಯುಕ್ತವನ್ನು ಬಲಗೊಳಿಸಬೇಕು ಎಂದು ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಕುಣಿಹಳ್ಳಿ ಮಂಜುನಾಥ್, ಭ್ರಷ್ಟಾಚಾರದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳದಿರುವ ಕಾರಣದಿಂದ ಲೋಕಾಯುಕ್ತ ಬಲಹೀನಗೊಳಿಸಿ ಎಸಿಬಿ ಸ್ಥಾಪಿಸಲಾಯಿತು. ಇಂದು ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂದು ದೂರಿದರು.

ರಾಜ್ಯದ ಬೊಕ್ಕಸ ಖಾಲಿ ಆಗುತ್ತಿದ್ದರೆ ಅಭಿವೃದ್ಧಿ ಮರೀಚಿಕೆ ಆಗಿದೆ. ಇಂತಹ ಸನ್ನಿವೇಶದಲ್ಲೂ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರಾಣದ ಹಂಗು ತೊರೆದು ಭ್ರಷ್ಟರ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರದ ಹಣ ಪೋಲಾಗದಂತೆ ತಡೆಯುತ್ತಿದ್ದಾರೆ ಎಂದರು.

ಭ್ರಷ್ಟರು ಲೋಕಾಯುಕ್ತ ಮತ್ತು ಎಸಿಬಿಗೆ ಹೆದರದೆ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಹೀಗಿದ್ದರೂ ಯಡಿಯೂರಪ್ಪ ಅವರು ಲೋಕಾಯುಕ್ತ ಬಲಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Related