ಬಸ್ ಸೌಲಭ್ಯ ಒದಗಿಸಿಕೊಡಲು ಆಗ್ರಹ

ಬಸ್ ಸೌಲಭ್ಯ ಒದಗಿಸಿಕೊಡಲು ಆಗ್ರಹ

ಜೇವರ್ಗಿ: ಜೇವರ್ಗಿ ತಾಲೂಕಿನ ಸುಮಾರು ಹಳ್ಳಿಗಳಿಗೆ ಸಮರ್ಪಕ ಬಸ್ ಸೌಲಭ್ಯ ಒದಗಿಸಿಕೊಡಲು ಆಗ್ರಹಿಸಿ ಪಟ್ಟಣದಲ್ಲಿ ಎಐಡಿಎಸ್‌ಒ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಮಿನಿ ವಿಧಾನಸೌಧದಿಂದ ಬಸ್ ನಿಲ್ದಾಣದವರೆಗೆ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿ, ಘಟಕ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು.
ಲಾಕ್‌ಡೌನ್ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ಬಸ್‌ಗಳ ಸಂಖ್ಯೆ ಕಡಿತಗೊಳಿಸಲಾಗಿತ್ತು. ಆದರೆ, ಈಗ ಜನಜೀವನ ಸಹಜ ಸ್ಥಿತಿಗೆ ಮರಳಿದರೂ ಬಸ್ ಸೌಕರ್ಯ ಕಲ್ಪಿಸಿಲ್ಲ. ಇದರಿಂದ ನಿತ್ಯ ನೂರಾರು ಹಳ್ಳಿಗಳಿಂದ ಪಟ್ಟಣದ ವಿವಿಧ ಶಾಲಾ-ಕಾಲೇಜುಗಳಿಗೆ ಓದಲು ಬರುವ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ.

ತಾಲೂಕಿನ ಕಟ್ಟಿಸಂಗಾವಿ, ಇಜೇರಿ, ಯಲಗೋಡ, ಬೀಳವಾರ, ಆಲೂರ, ಹಂಚಿನಾಳ, ಸಾಥಖೇಡ, ಬಳಬಟ್ಟಿ, ಹರವಾಳ ಸೇರಿದಂತೆ ಹಲವಾರು ಹಳ್ಳಿಗಳಿಗೆ ಬಸ್ ಸೌಕರ್ಯ ಇಲ್ಲ. ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಕೂಡಲೇ ಎಲ್ಲಾ ಹಳ್ಳಿಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿ ಪತ್ರದ ಮೂಲಕ ಎಚ್ಚರಿಸಲಾಯಿತು.

ಈ ಸಂದರ್ಭದಲ್ಲಿ ಎಐಡಿಎಸ್‌ಒ ಜಿಲ್ಲಾ ಸಮಿತಿ ಸದಸ್ಯ ರಮೇಶ ದೇವಕರ್, ತಾಲೂಕು ಘಟಕದ ಸಂಚಾಲಕ ಅರುಣಕುಮಾರ ಹಿರೇಬಾನರ, ನಜೀರ, ಬಸವರಾಜ, ಪ್ರವೀಣ, ಅಂಬರೀಶ, ಸೋಹೆಲ್, ಶಕುಂತಲಾ, ನಿರ್ಮಲಾ, ಭಾಗ್ಯಶ್ರೀ ನೇತೃತ್ವ ವಹಿಸಿದ್ದರು.

Related